ನೀರಿನ ಭರವಸೆ ನೀಡಿ ಮತಬೇಟೆ
ಮತ್ತೀಕೆರೆ ಜಯರಾಮ್
ರಾಮನಗರ: ಭೀಕರ ಬರಕ್ಕೆ ತುತ್ತಾದ ರಾಮನಗರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಈ ಸಮಸ್ಯೆ ಮುಂದಿಟ್ಟುಕೊಂಡು ಜನರು ಅಭ್ಯರ್ಥಿಗಳ ಬೆವರಿಳಿಸುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡ ರಾಜಕಾರಣಿಗಳು ಶಾಶ್ವತ ನೀರಾವರಿ ಭರವಸೆ ನೀಡಿ ಮತಬೇಟೆ ಮುಂದುವರೆಸಿದ್ದಾರೆ.
ಕಳೆದ ಒಂದೂವರೆ ದಶಕದಿಂದ ರಾಮನಗರವೂ ಸಹಿತ ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡಿದೆ. ಸತತ ಮೂರು ವರ್ಷದಿಂದ ಈ ಜಿಲ್ಲೆಯಲ್ಲಿ ಬರ ಬಂದೊದಗಿದೆ. ನದಿ, ತೊರೆಗಳಲ್ಲಿ ನೀರು ಹರಿದೇ ಇಲ್ಲ. ತೆರೆದ ಬಾವಿ, ಕೆರೆ, ಕಟ್ಟೆಗಳು ತುಂಬಿಲ್ಲ. ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಕೈ ಪಂಪುಗಳು ಸ್ಮಾರಕಗಳಂತೆ ನಿಂತಿವೆಯೇ ಹೊರತು ಎಲ್ಲೂ ನೀರು ಬರುತ್ತಿಲ್ಲ. ಕುಡಿಯುವ ನೀರು ಸರಬರಾಜಿಗೆ ಕೊರೆದ ಶೇಕಡ 60ರಷ್ಟು ಕೊಳವೆ ಬಾವಿಗಳೂ ವಿಫಲಗೊಂಡಿವೆ. ಬಹುತೇಕ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಶೋನೀಯ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಅಭ್ಯರ್ಥಿಗಳಿಗೆ ತರಾಟೆ: ಕಳೆದ ಕೆಲ ವರ್ಷಗಳಿಂದ ಇಲ್ಲಿ ಚುನಾವಣೆಗೆ ಇಳಿಯುವ ಅಭ್ಯರ್ಥಿಗಳಿಗೆ ನೀರಿನ ಸಮಸ್ಯೆಯದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಮರು ಆಯ್ಕೆ ಬಯಸಿದವರು, ಪ್ರಮುಖ ಅಭ್ಯರ್ಥಿಗಳ ಪಾಲಿಗಂತೂ ನೀರಿನ ಬವಣೆಯು ಚುನಾವಣೆ ಸಹವಾಸವೇ ಬೇಡವೆನ್ನುವಷ್ಟು ಬೇಸರ ತಂದಿದೆ.
ಅದು ನಗರ, ಪಟ್ಟಣವೇ ಆಗಲಿ. ಹಳ್ಳಿ, ಗಲ್ಲಿಗೇ ಹೋಗಲಿ ಎಲ್ಲಿ ನೋಡಿದರೂ ಕಣ್ಣಿಗೆ ರಾಚುವುದು ನಲ್ಲಿ,
ತೊಂಬೆಗಳ ಎದುರು ರಾಶಿಗಟ್ಟಲೆ ಇರುವ ಖಾಲಿ ಕೊಡಗಳೇ. ನೀರಿಗೆ ನಿಂತ ನೀರೆಯರು ಸಹಿತ ಜನತೆ ಮತಯಾಚನೆಗೆ ಬಂದವರನ್ನು ನೋಡಪ್ಪಾ ನಮ್ಮ ಗತಿ ಎಂದು ಕೊಂಕು ನುಡಿಗಳನ್ನಾಡುವುದು ಸರ್ವೇ ಸಾಮಾನ್ಯ. ಸಾಕಷ್ಟು ಕಡೆ ಅಭ್ಯರ್ಥಿಗಳ ಹರಿ ಹಾಯ್ದಿದ್ದೂ ಉಂಟು.
ಖಾಲಿ ಕೊಡ ಪ್ರದರ್ಶನ: ಪ್ರಮುಖವಾಗಿ ಚನ್ನಪಟ್ಟಣ, ರಾಮನಗರ ಮತ್ತು ಮಾಗಡಿ ತಾಲೂಕುಗಳಲ್ಲಿ ಅಭ್ಯರ್ಥಿಗಳ ಪಾಲಿಗೆ ಕುಡಿಯುವ ನೀರಿನ ಸಮಸ್ಯೆಯೇ ದೊಡ್‌ಡ ಸವಾಲಾಗಿದೆ. ಖಾಲಿ ಕೊಡ ಹಿಡಿದು ಅಲ್ಲಲ್ಲಿ ಪ್ರತಿಭಟನೆಯೂ ನಡೆದಿದೆ. ಅಭ್ಯರ್ಥಿಗಳ ಜತೆಗೆ ಅಲ್ಲಿದ್ದ ಸ್ಥಳೀಯ ಜನಪ್ರತಿನಿಧಿಗಳಿಗೂ ಮುಖ ಮುಲಾಜು ನೋಡದೆ ಜನತೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ.
ರಾಮನಗರದಲ್ಲಿ ವಾರಕ್ಕೊಮ್ಮೆ ನೀರು ಸಿಕ್ಕರೆ ಅದೇ ಪುಣ್ಯ. ಇನ್ನು ಹಳ್ಳಿಗಾಡಿನಲ್ಲಿ ದಿನಕ್ಕೆ 4-5 ಬಿಂದಿಗೆ ನೀರು ಸಿಗದ ಸ್ಥಿತಿ ಇದೆ. ಅನೇಕ ಕಡೆ ಖಾಸಗಿ ಜಮೀನು, ತೋಟಗಳಿಂದ ನೀರು ಹೊತ್ತು ತರುವ ಪರಿಸ್ಥಿತಿ ಕಾಣಬಹುದಾಗಿದೆ. ಗ್ರಾಮೀಣರು ನೀರಿಗಾಗಿ ರಾತ್ರಿಯಲ್ಲೂ ಕೊಡ ಹಿಡಿದು ಹೋಗುತ್ತಿದ್ದಾರೆ.