ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಜಯಲಕ್ಷ್ಮಿಗಾಗಿ ಹೋಮದ ಮೊರೆ

Rashmi Kasaragodu
Updated On : 7 Apr 2014, 1:46 am

ರಾಮನಗರ: ದೇವೇಗೌಡರ ನಾಮಬಲವನ್ನೇ ನೆಚ್ಚಿಕೊಂಡು ಹೋರಾಟಕ್ಕೆ ಇಳಿದ ಬೆಂಗಳೂರು ಗ್ರಾಮಾಂತರದ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರರೆಡ್ಡಿ ವಿಜಯಲಕ್ಷ್ಮಿಗಾಗಿ ಹೋಮ, ಹವನದೊಂದಿಗೆ ದೈವಶಕ್ತಿಯ ಮೊರೆ ಹೊಕ್ಕಿದ್ದಾರೆ.  
ಬಿಡದಿ ಸಮೀಪವಿರುವ ಕೋತಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ನಡೆದ ವಿಜಯಲಕ್ಷ್ಮಿ ಮತ್ತು ಹನುಮ ಹೋಮದಲ್ಲಿ ಪ್ರಭಾಕರರೆಡ್ಡಿ ಪೂರ್ಣಾಹುತಿ ಅರ್ಪಿಸಿ, ಚುನಾವಣೆ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.  ಪುಢಾರಿಗಳಿಂದಿಡಿದು ಘಟಾನುಘಟಿ ನಾಯಕರನೇಕರು ಚುನಾವಣೆ ಕಣಕ್ಕೆ ಇಳಿದಾಗ ಹರಕೆ ಕಟ್ಟಿಕಳ್ಳುವುದು, ಮಾಟ, ಮಂತ್ರ, ಹೋಮ, ವಿಶೇಷ ಪೂಜೆ, ಹವನ, ಯಜ್ಞ, ಯಾಗಾದಿಗಳನ್ನು ನಡೆಸುವುದು ಹೊಸದಲ್ಲ. ಆದರೆ, ಅದೆಲ್ಲ ಗುಟ್ಟಾಗಿ ನೆರವೇರುತ್ತದೆ.
ತಡವಾಗಿ ಆಗಮನ: ಪ್ರಭಾಕರರೆಡ್ಡಿ ಅಪ್ಪಟ ದೈವಭಕ್ತ. ಹೋಮ ನಡೆದಿದ್ದು ಅವರ ಹೆಸರಿನಲ್ಲೇ ಆದರೂ ನಡೆಸಿದ್ದು ಮಾತ್ರ ಛಲವಾದಿ ಮಹಾಸಭಾದ ಸ್ಥಾಪಕ ಮತ್ತು ಬಿಜಾಪುರದ ಜೆಡಿಎಸ್ ಅಭ್ಯರ್ಥಿ ಕೆ.ಶಿವರಾಂ ಅವರ ಅನುಯಾಯಿಗಳು. ಮುಂಜಾನೆಯಿಂದಲೇ ಹೋಮ ನಡೆಸಿದರೂ ರೆಡ್ಡಿ ಮಧ್ಯಾಹ್ನ 2ಕ್ಕೆ ಆಗಮಿಸಿದರು.
ಈ ವಿಷಯವಾಗಿ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ, ನಮ್ಮ ಅಭ್ಯರ್ಥಿ ಪ್ರಭಾಕರರೆಡ್ಡಿ  ದೈವಭಕ್ತರು. ಪೂಜೆ, ಪುನಸ್ಕಾರ ಮಾಡುವುದರಲ್ಲಿ ನಮ್ಮ ನೇತಾರ ದೇವೇಗೌಡರಿಗೆ ಅತೀವ ನಂಬಿಕೆ. ನಮಗೂ ದೈವಭಕ್ತಿ, ನಂಬಿಕೆ ಇರೋದ್ರಿಂದ ಪೂಜೆ ಮಾಡಿದ್ದರಲ್ಲಿ ತಪ್ಪೇನಿದೆ ಎಂದರು.
ವೆಚ್ಚ ವೀಕ್ಷಕರಿಗೆ ತಲೆನೋವು: ಹೋಮ ನಡೆಸಿರುವುದು ತಾವೆಂದು ಛಲವಾದಿ ಮಹಾಸಭಾದ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.
  ಪೂರ್ಣಾಹುತಿ ನೀಡಿದವರು ಪ್ರಭಾಕರರೆಡ್ಡಿ. ಹೀಗಾಗಿ ಅದರ ಖರ್ಚು-ವೆಚ್ಚವನ್ನೆಲ್ಲಾ ಅಭ್ಯರ್ಥಿ ಲೆಕ್ಕಕ್ಕೆ ಹಾಕಬೇಕೇ ಬೇಡವೇ ಎನ್ನುವ ಜಿಜ್ಞಾಸೆ ವೆಚ್ಚ ವೀಕ್ಷಕರನ್ನು ಕಾಡುತ್ತಿದೆ. ಇಂಥದ್ದೊಂದು ಹೋಮ ನಡೆಸಲು ಆಗುವ ಖರ್ಚು ಕಮ್ಮಿಯೇನಲ್ಲ.
 ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯಲ್ಲಿ ವಿಶೇಷ ಪೂಜೆ, ಹೋಮ, ಹವನದ ಖರ್ಚು ವಿವರ ಇಲ್ಲ. ಹೀಗಾಗಿ ಅಧಿಕಾರಿಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.




ಹೋದಲ್ಲೆಲ್ಲಾ ಗೌಡರ ಸ್ತುತಿ
ನನಗೆ ನೀವು ಕೊಡುವ ಒಂದೊಂದು ಮತವೂ ನೇರವಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ನೀಡಿದಷ್ಟೇ ಮಹತ್ವ ಎನ್ನುವ ಮಾತನ್ನು ಬೆಂಗಳೂರು ಗ್ರಾಮಾಂತರದ ಜೆಡಿಎಸ್ ಅಭ್ಯರ್ಥಿ ಆರ್.ಪ್ರಭಾಕರರೆಡ್ಡಿ ಹೋದೆಡೆಯಲ್ಲೆಲ್ಲಾ ಹೇಳುತ್ತಾರೆ.  ತೃತೀಯ ರಂಗದ ಸರ್ಕಾರ ಬಂದರೆ ದೇವೇಗೌಡ ಅಪ್ಪಾಜಿಯವ್ರು ಮತ್ತೊಮ್ಮೆ ಪ್ರಧಾನಿ, ಕುಮಾರಸ್ವಾಮಿ ಅಣ್ಣಾವ್ರು ಮಂತ್ರಿ ಆಗ್ತಾರೆ. ಹೀಗೆ ಆಗಬೇಕೆಂದರೆ ರಾಜ್ಯದಲ್ಲಿ 10-12 ಸೀಟು ನಮ್ಮ ಪಕ್ಷಕ್ಕೆ ಬೇಕು. ಇಲ್ಲಿ ನನ್ನನ್ನು ಗೆಲ್ಲಿಸಿದ್ರೆ ಅವರಿಬ್ಬರಿಗೂ ಶಕ್ತಿ ತುಂಬಿದಂತೆ ಎನ್ನುವುದು ರೆಡ್ಡಿ ನಿವೇದನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement