20000 ಕೋಟಿ ಮೌಲ್ಯದ ಭೂ ಕಬಳಿಕೆಗೆ ಅಶೋಕ ಯತ್ನ!
ಹುಬ್ಬಳ್ಳಿ: ಸಾರ್ವಜನಿಕರಿಗೆ ಸೇರಿದ 20 ಸಾವಿರ ಕೋಟಿ ಮೌಲ್ಯದ ಭೂಮಿ ಕಬಳಸಲು ಬಿಬಿಎಂಪಿ ಮಾಜಿ ಮೇಯರ್ ಜತೆ ಸೇರಿ ಹುನ್ನಾರ ನಡೆಸಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರನ್ನು ತಕ್ಷಣ ಬಂಧಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಿಂದ 12 ಕಿ.ಮೀ. ದೂರದಲ್ಲಿರುವ ಸೋಮನಹಳ್ಳಿಯ ಸರ್ವೆ ನಂ.242ರ 8 ಎಕರೆ ಭೂಮಿಯನ್ನು ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ ಜತೆ ಸೇರಿ ಕಬಳಿಸಲು ಹುನ್ನಾರ ನಡೆಸಿದ್ದು ದಾಖಲೆಯಿಂದ ಸ್ಪಷ್ಟಗೊಂಡಿದೆ. ಈ ಪೈಕಿ ತಲಾ 4 ಎಕರೆ ಭೂಮಿ ವೆಂಕಟೇಶಮೂರ್ತಿ ಹಾಗೂ ಅವರ ಪತ್ನಿ ಕೆ. ಪ್ರಭಾ ಹೆಸರಿನಲ್ಲಿದೆ ಎಂದರು. ರಾಜ್ಯದಲ್ಲಿ ನಡೆದಿರುವ ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಪರಿಷತ್, ಹೈಕೋರ್ಟ್‌ನಲ್ಲಿ ಸಾವಿರ ಪುಟಗಳ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸುತ್ತ ಹಾಗೂ 18 ಕಿ.ಮೀ. ಒಳಗಡೆ ನಡೆದಿರುವ ಒತ್ತುವರಿಯನ್ನು ಸಕ್ರಮಗೊಳಿಸಿದ್ದನ್ನು ಪ್ರಶ್ನಿಸಿ 92 ಪುಟಗಳ ಮಧ್ಯಂತರ ವರದಿಯನ್ನೂ ಸಲ್ಲಿಸಲಾಗಿದೆ ಎಂದರು.
ಎಂಟು ಎಕರೆ ಭೂಮಿ ಕಬಳಿಸಲು ಯತ್ನಿಸಿರುವ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಒತ್ತುವರಿ ತೆರವುಗೊಳಿಸಿ, ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅವರಿಂದಲೇ ಸರ್ಕಾರದ ಬೊಕ್ಕಸಕ್ಕೆ ಹಣ ಭರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.