ದೇಶ ಮುನ್ನಡೆಸುವ ಶಕ್ತಿ ಕಾಂಗ್ರೆಸ್ಗೆ ಮಾತ್ರ ಸಾಧ್ಯ
ನೆಲಮಂಗಲ: ದೇಶ ಮುನ್ನಡೆಸುವ ಶಕ್ತಿ ಕಾಂಗ್ರೆಸ್ಗೆ ಮಾತ್ರ ಸಾಧ್ಯವಿದ್ದು, ಕೇಂದ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಆಡಳಿತ ಖಚಿತ, ಕೆಲ ಮಾಧ್ಯಮಗಳ ಸಮೀಕ್ಷೆಗಳು ಸುಳ್ಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಅವರು ಭಾನುವಾರ ಪಟ್ಟಣದಲ್ಲಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ ಕಾಂಗ್ರೆಸ್ಗೆ ಬಿಜೆಪಿ ಮಾತ್ರ ಪರ್ಯಾಯ ಪಕ್ಷವಾಗಿದ್ದು ಸದ್ಯಕ್ಕೆ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಭವಿಷ್ಯ ನುಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣದ ಮೇಲೆ ಕಣ್ಣಿಟ್ಟು ಗೆದ್ದರಾದರೂ ವಿರೋಧ ಪಕ್ಷದ ಸ್ಥಾನ ಹೋಯಿತೆಂದು ಮತ್ತೆ ಇದೀಗ ರಾಜಿನಾಮೆ ನೀಡಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಂದಿದ್ದಾರೆ. ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ನಿಮ್ಮ ಮತ ವ್ಯರ್ಥವಾಗದಂತೆ ಕಾಂಗ್ರೆಸ್ ಅಭ್ಯರ್ಥಿ ಅನುಭವಿ ರಾಜಕಾರಣಿ ವೀರಪ್ಪ ಮೊಯ್ಲಿರವರನ್ನು ಆಯ್ಕೆ ಮಾಡಿಕೊಳ್ಳುವಂತೆ ವಿನಂತಿಸಿದರು.
ದೇವೇಗೌಡ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಜನತೆಗೆ ನೀರು ನೀಡಿದ್ದರೆ ಮೊಯ್ಲಿ ಇಲ್ಲಿಗೆ ಬರುವ ಅವಶ್ಯಕತೆಯೇ ಇರಲಿಲ್ಲ. ಇದೀಗ ನೀರಿನ ರಾಜಕಾರಣ ಮಾಡಲು ಹೊರಟಿದ್ದಾರೆ. ಆದ್ದರಿಂದ ಜನರೇ ಈ ಬಾರಿ ಅವರನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸಲಿದ್ದಾರೆ ಎಂದರು.
ಹೆಚ್.ಡಿ.ದೇವೇಗೌಡ ತಮ್ಮ ಬಿಟ್ರೆ ಕುಟುಂಬದಿಂದ ಯಾರೂ ಚುನಾವಣೆಗೆ ನಿಲ್ಲಲ್ಲ ಎಂದಿದ್ದರು. ಕಳೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಿದ್ದಕ್ಕೆ ರಾಮನಗರದ ಜನತೆ ನಮ್ಮ ಕತ್ತುಕೊಯ್ದರೆಂದು ಕಣ್ಣೀರು ಹಾಕುವ ಮೂಲಕ ರಾಮನಗರದ ಜನತೆಗೆ ದ್ರೋಹ ಬಗೆದು ಇಲ್ಲಿಗೆ ಬಂದಿದ್ದಾರೆ ಎಂದರು.
ಮನವಿ: ಮೊಯ್ಲಿಯವರ ಪುತ್ರ ಹರ್ಷ ಮೊಯ್ಲಿ ಮಾತನಾಡಿ ಕಳೆದ ಚುನಾವಣೆಯಲ್ಲಿ ನಮ್ಮ ತಂದೆಯವರಿಗೆ ರಾಜಕೀಯ ಪುನರ್ ಜನ್ಮ ನೀಡಿದ್ದೀರಿ. ನಿಮ್ಮ ಋಣ ನಮ್ಮ ತಂದೆಯ ಮೇಲಿದೆ ಎಂದರು.
ತಾಲ್ಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಆರ್.ಉಮೇಶ್ ಪ್ರಾಸ್ಥಾವಿಕವಾಗಿ ಮಾತನಾಡಿ ಮೊಯ್ಲಿ ಪರ ಮತ ಯಾಚಿಸಿದರು. ಇಂಡಿಯನ್ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ (ಯು.ಪಿ), ಮಾಜಿ ಸಚಿವ ಡಾ.ಎಂ.ಶಂಕರನಾಯಕ್, ಜಿ.ಪಂ. ಮಾಜಿ ಸದಸ್ಯ ಹೆಚ್.ಪಿ.ಚೆಲುವರಾಜು ಮಾತನಾಡಿದರು. ಮಾಜಿ ಸಚಿವ ಅಂಜನಮೂರ್ತಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಕೆಪಿಸಿಸಿ ಸದಸ್ಯ ಖಲೀಮುಲ್ಲಾ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿದ್ದಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಆರ್.ಗೌಡ, ಸಿದ್ದರಾಮು, ಮುಖಂಡರಾದ ವೆಂಕಟೇಶ್ಬಾಬು ವರದನಾಯಕನಹಳ್ಳಿ ನಾಗರಾಜು ಇತರರು ಇದ್ದರು.