ವೋಟ್ ಬ್ಯಾಂಕ್ಗಾಗಿ ದಲಿತರನ್ನು ಬಳಸಿಕೊಂಡಿದ್ದೇ ಕಾಂಗ್ರೆಸ್: ಬಿಜೆಪಿ ಆರೋಪ
ಸೂಲಿಬೆಲೆ: ಚುನಾವಣೆ ವೇಳೆಯಲ್ಲಿ ಮಾತ್ರ ದಲಿತರು ಕಾಂಗ್ರೆಸ್ ಮುಖಂಡರಿಗೆ ಜ್ಞಾಪಕಕ್ಕೆ ಬರುತ್ತಾರೆ. ಉಳಿದಂತೆ ಅವರ ಕಡೆ ಮುಖ ಸಹ ತೋರುವುದಿಲ್ಲ. ದಲಿತರ ಅಭಿವೃದ್ಧಿ ಹಾಗೂ ದೇಶದ ಬದಲಾವಣಿಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿಯ ಹಿರಿಯ ಮುಖಂಡ ಬಿ.ಎನ್. ಗೋಪಾಲಗೌಡ ಹೇಳಿದರು.
ಸೂಲಿಬೆಲೆಯ ಶಾಂತನಪುರ ಗ್ರಾಮದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರನ್ನು ಉದ್ದೇಶಿಸಿ ಮಾತನಾಡಿದರು.
ದಲಿತರ ಅಭಿವೃದ್ಧಿ ಹೆಸರೇಳಿಕೊಂಡು ಮತ ಪಡೆದು ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ದಲಿತರ ಪ್ರಗತಿ ಮಾಡಿದ್ದೇನು, ದಲಿತರ ಪ್ರಗತಿಗಾಗಿ ಬಿಜೆಪಿಗೆ ಮತ ನೀಡಿ. ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಕ್ಷೇತ್ರಕ್ಕೆ ಮಾಡಿದ್ದೇನು ಇಲ್ಲ. ರಾಮನಗರದಿಂದ ಪಲಾಯನವಾದಿಯಾಗಿ ಬಂದ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ. ರಾಮನಗರದಲ್ಲಿಯೇ ಏನು ಮಾಡದವರು ಇನ್ನು ಚಿಕ್ಕಬಳ್ಳಾಪುರಕ್ಕೆ ಬಂದು ಏನು ಮಾಡಲು ಸಾಧ್ಯ. ಬಿಜೆಪಿಯ ಬಚ್ಚೇಗೌಡರ ಸ್ಥಳೀಯ ವ್ಯಕ್ತಿಯಾಗಿದ್ದು, ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಪ್ರಗತಿ ಕಾರಣರಾಗಬೇಕು. ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನೆಲೆ ಕಳೆದುಕೊಳ್ಳಲಿವೆ. ಕ್ಷೇತ್ರದಲ್ಲಿ ಬಿಜೆಪಿಗೆ ಒಲವಿದ್ದು, ಈ ಬಾರಿ ಭಾರಿ ಮತದೊಂದಿಗೆ ಬಚ್ಚೇಗೌಡರನ್ನು ಗೆಲ್ಲಿಸಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದರು. ಹಿರಿಯ ಮುಖಂಡರು ಈ ವೇಳೆ ಹಾಜರಿದ್ದರು.