ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಗರದೇವತೆ ಜಾತ್ರೆಗೆ ಸಜ್ಜಾದ ದೊಡ್ಡಬಳ್ಳಾಪುರ

Vishwanath S
Updated On : 22 Apr 2014, 12:52 pm

ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿರುವ ನಗರದೇವತೆ ಶ್ರೀಮಾತೆ ಮುತ್ಯಾಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ದೊಡ್ಡಬಳ್ಳಾಪುರ ಸಜ್ಜಾಗಿದೆ. ಏ.22ರ ಮಂಗಳವಾರ ಮತ್ತು 23ರ ಬುಧವಾರ 2 ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.
ದೇವಾಲಯದ ನೂತನ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪುನಃ ಪ್ರತಿಷ್ಠಾಪನೆ, ಆಲಯ ಗೋಪುರ ಕಳಶ ಕುಂಭಾಭಿಷೇಕ ನಡೆದ ನಂತರ ನಡೆಯುತ್ತಿರುವ ಮೊದಲ ಜಾತ್ರಾ ಕಾರ್ಯಕ್ರಮ ಇದಾಗಿದ್ದು, ಭಕ್ತಾದಿಗಳು ಅತೀವ ಉತ್ಸಾಹಕ್ಕೆ ಕಾರಣವಾಗಿದೆ. ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ
ಇದ್ದು, ದೇಗುಲದಲ್ಲಿ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ದೇಗುಲದಲ್ಲಿ ಭಕ್ತಿ ವೈಭವ ಮನೆ ಮಾಡಿದ್ದು ಎಲ್ಲೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಶ್ರೀಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಶಕ್ತಿದೇವತೆಗಳ ಕೇಂದ್ರಸ್ಥಾನವಾಗಿರುವ ಮುತ್ಯಾಲಮ್ಮ ದೇವಿ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸಲಾಗಿತ್ತು.
ಪಂಚ ಗ್ರಾಮದ ಆರತಿ: ಮುತ್ಯಾಲಮ್ಮ ಜಾತ್ರೆಯ ಅಂಗವಾಗಿ ಸಾಂಪ್ರದಾಯಿಕವಾಗಿ ಸುತ್ತಲಿನ 5 ಗ್ರಾಮಗಳಿಂದ ವಿಶೇಷ ಪೂಜಾರತಿಗಳನ್ನು ತಂದು ಪೂಜಿಸಲಾಗುತ್ತದೆ. ಈ ಹಿಂದೆ ಪ್ರತಿ ಗ್ರಾಮದಿಂದಲೂ ರಥದೋಪಾದಿಯಲ್ಲಿ ಸಿಂಗರಿಸಲ್ಪಟ್ಟ ಕುರ್ಜುಗಳು ಜಾತ್ರೆಗೆ ಆಗಮಿಸಿ ಗಮನ ಸೆಳೆಯುತ್ತಿದ್ದವು. ಎತ್ತುಗಳನ್ನು ಕುರ್ಜುಗಳಿಗೆ ಕಟ್ಟಿ ನಡೆಯುತ್ತಿದ್ದ ಓಟ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಈ ಬಗೆಯ ಸಾಂಪ್ರದಾಯಿಕ ಆಚರಣೆಗಳು ಮರೆಯಾಗಿ ಜಾತ್ರೆ ವೈಶಿಷ್ಟ್ಯತೆಗಳ ಜೊತೆಗೆ ಆಧುನಿಕ ಸ್ಪರ್ಶ ಪಡೆದುಕೊಂಡಿದೆ. ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ರೋಜಿಪುರ ಮತ್ತು ನಾಗಸಂದ್ರ ಗ್ರಾಮದ ಜನ ಮುತ್ಯಾಲಮ್ಮದೇವಿಯ ವಿಶೇಷಾರಾಧಕರು. ವಾಸ್ತವವಾಗಿ ರೋಜಿಪುರ ಶ್ರೀಮಾತೆಯ ತವರು ಎಂಬ ಪ್ರತೀತಿ ಇದೆ. ಹೀಗಾಗಿಯೇ ಜಾತ್ರಾ ಮೆರವಣಿಗೆ ರೋಜಿಪುರಕ್ಕೆ ತೆರಳಿ ಹಿಂತಿರುಗುವುದು ಎನ್ನುತ್ತಾರೆ.
ದೇವಾಲಯದ ಐತಿಹ್ಯ: ಶತಮಾನದ ಇತಿಹಾಸ ಹೊಂದಿರುವ ದೇಗುವ ಎಪ್ಪತ್ತರ ದಶಕದಲ್ಲಿ ಜೀರ್ಣೋದ್ಧಾರಗೊಂಡು ನಗರಾದ್ಯಂತ ಹೆಸರುಗಳಿಸಿದೆ. ಶ್ರೀಮಾತೆ ಸಂಕಟ ನಿವಾರಣೆ ಮತ್ತು ಪಿಡುಗು ನಿವಾರಣೆಯ ಶಕ್ತಿದೇವತೆಯಾಗಿ ಆರಾಧಿಸಲ್ಪಡುತ್ತಿದ್ದಾಳೆ. ಸೇಂದಿ ಚಿಕ್ಕಹನುಮಂತಪ್ಪ ಮತ್ತು ಮುತ್ತಮ್ಮ ಕುಟುಂಬ ದೇಗುಲವನ್ನು ಕಟ್ಟಿಸಿದರೆಂಬ ಐತಿಹ್ಯ ಇದೆ. ಕಳೆದ 2 ತಿಂಗಳ ಹಿಂದೆಯಷ್ಟೇ ಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಹೊಸ ದೇವಾಲಯ ಲೋಕಾರ್ಪಣೆಗೊಂಡಿದೆ.
ಶಕ್ತಿದೇವತೆ: ಮುತ್ಯಾಲಮ್ಮ ದೊಡ್ಡಬಳ್ಳಾಪುರದ ನಗರದೇವತೆಯಾಗಿ ಆರಾಧಿಸಲ್ಪಡುವ ದೈವ. ನಗರದ ಹಲವು ಬಡಾವಣೆಗಳಲ್ಲಿ ಶ್ರೀಮಾತೆಯನ್ನು ತಂದು ಪ್ರತಿಷ್ಠಾಪಿಸಿ ಪೂಜಿಸಿ ಆರತಿಗಳನ್ನು ಸಮರ್ಪಿಸುವ ಪರಿಪಾಠ ಇಂದಿಗೂ ಉಳಿದುಕೊಂಡು ಬಂದಿದೆ. ಕಾಳಿಕಾ ಕಮಟೇಶ್ವರ, ಗಂಗಾಪರಮೇಶ್ವರಿ ಸೇರಿದಂತೆ ಹಲವು ಶಕ್ತಿದೇವತೆಗಳನ್ನು ನಾಗರಿಕರು ಶ್ರದ್ಧಾಭಕ್ತಿಗಳಿಂದ ಪೂಜಿಸಿ ಸ್ತುತಿಸುತ್ತಾರೆ. ಸಿಡುಬು ಅನೇಕ ಚರ್ಮವ್ಯಾದಿಗಳಿಗೆ ಶ್ರೀಮಾತ್ರೆ ತೀರ್ಥ ಪ್ರಸಾದ ಸಿದ್ಧೌಷಧ ಎಂಬ ನಂಬಿಕೆ ಜನಜನಿತವಾಗಿದೆ.
ಸಿದ್ಧತೆ ಪೂರ್ಣ: ಜಾತ್ರೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ವೇದಿಕೆ ಸಜ್ಜಾಗಿದೆ. ಶ್ರೀಮಾತೆಗೆ ವಿಶೇಷಾಲಂಕಾರ ನಡೆಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ರಥೋತ್ಸವ ನಡೆಯಲಿದೆ. ನಂತರ ಆರತಿಗಳ ಸಮರ್ಪಣೆ ಕಾರ್ಯಕ್ರಮ ಇರುತ್ತದೆ. ಬುಧವಾರ ಹಗಲುಜಾತ್ರೆ ನಡೆಯಲಿದೆ. ಬೆಂಡು-ಬತ್ತಾಸು ಅಂಗಡಿಗಳು, ಆಟಿಕೆಗಳ ಅಂಗಡಿಗಳು ಮನೆಮಾಡಿವೆ. ನಾಟಕೋತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement