ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾವಾರು ಮತದಾನಬೆಂ.ಗ್ರಾ.ಜಿಲ್ಲೆಗೇ ಅಗ್ರಸ್ಥಾನ

Vishwanath S
Updated On : 23 Apr 2014, 12:56 pm

ಕ.ಪ್ರ.ವಾರ್ತೆ  ರಾಮನಗರ  ಏ.22
ಲೋಕಸಭಾ ಕ್ಷೇತ್ರವಾರು ಮತದಾನದಲ್ಲಿ ದಕ್ಷಿಣ ಕನ್ನಡವೇ ಅಗ್ರಸ್ಥಾನ ಗಿಟ್ಟಿಸಿರಬಹುದು. ಆದರೆ, ಜಿಲ್ಲಾವಾರು ಮತದಾನದ ಲೆಕ್ಕದಲ್ಲಿ ರಾಜ್ಯ ರಾಜಧಾನಿ ಮಗ್ಗುಲಲ್ಲಿರುವ ಮೂರು ಜಿಲ್ಲೆಗಳು ಪ್ರಾಬಲ್ಯ ಮೆರೆದಿವೆ.  
ಶೇಕಡ 79.73ರಷ್ಟು ಪ್ರಮಾಣದ ಮತ ಚಲಾವಣೆಯೊಂದಿಗೆ ಜಿಲ್ಲಾವಾರು ಮತದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯೇ ಅಗ್ರಸ್ಥಾನಕ್ಕೇರಿದೆ. ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿವೆ.  
ಚಿಕ್ಕಬಳ್ಳಾಪುರ ಜಿಲ್ಲೆಯ ಮತದಾನ ಪ್ರಮಾಣ ಶೇಕಡ 77.983 ಆಗಿದ್ದರೆ, ರಾಮನಗರ ಜಿಲ್ಲೆಯ ಮತದಾನ ಪ್ರಮಾಣ ಶೇಕಡ 77.980 ಆಗಿದೆ. ಇವೆರಡು ಜಿಲ್ಲೆಗಳ ನಡುವಿನ ಅಂತರ 0.003 ಅಷ್ಟೇ. 2 ಕಡೆ ಮತದಾನ ಬಹಿಷ್ಕಾರ ಆಗದಿದ್ದರೆ ರಾಮನಗರ ಜಿಲ್ಲೆ 2ನೇ ಸ್ಥಾನಕ್ಕೇರುತ್ತಿತ್ತು.
ಲೋಕಸಭಾ ಕ್ಷೇತ್ರದ ಮತದಾನದಲ್ಲಿ ಮೊದಲ ಸ್ಥಾನ ದಕ್ಷಿಣ ಕನ್ನಡದ್ದೇ. ಆದರೆ, ದಕ್ಷಿಣ ಕನ್ನಡವು ಜಿಲ್ಲಾವಾರು ಮತದಾನದಲ್ಲಿ ಶೇಕಡ 77.18 ಪ್ರಮಾಣದೊಂದಿಗೆ 4ನೇ ಸ್ಥಾನಕ್ಕೆ ಕುಸಿದಿದೆ. ಉಡುಪಿ ಜಿಲ್ಲೆಯು ಶೇಕಡ 75.98 ಪ್ರಮಾಣದೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಾವೇ ಸ್ಟ್ರಾಂಗು: ಬೆಂಗಳೂರು ನಗರ ಜಿಲ್ಲೆಯಲ್ಲಿ ಮತದಾನಕ್ಕೆ ನಿರುತ್ಸಾಹ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಆಸುಪಾಸಿನಲ್ಲಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಮತದಾರರು ನಾವೇ ಸ್ಟ್ರಾಂಗು ಎಂದು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಅಗ್ರಸ್ಥಾನಕ್ಕೇರಿದ್ದರೆ, ರಾಮನಗರ ದ್ವಿತೀಯ ಸ್ಥಾನದಲ್ಲಿತ್ತು. 3ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಈಗ ಅಗ್ರಸ್ಥಾನಕ್ಕೇರಿದೆ. ಮೊದಲೆರಡು ಸ್ಥಾನ ಪಡೆದಿದ್ದ ಜಿಲ್ಲೆಗಳು ತಲಾ ಒಂದೊಂದು ಸ್ಥಾನ ಕುಸಿದಿವೆ.  
ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡ 83.50ರಷ್ಟು ಮತದಾನವಾಗಿದ್ದರೆ, ರಾಮನಗರ ಜಿಲ್ಲೆಯಲ್ಲಿ ಶೇಕಡ 82.99ರಷ್ಟು ಮತದಾನವಾಗಿತ್ತು. ಎರಡೂ ಜಿಲ್ಲೆಗಳ ನಡುವಿನ ಅಂತರ ಅಲ್ಪಮಟ್ಟಿನದ್ದಷ್ಟೇ.
ಜಿದ್ದಾಜಿದ್ದಿಯೇ ಕಾರಣ: ಬೆಂಗಳೂರು ಆಸುಪಾಸಿನ ಜಿಲ್ಲೆಗಳಲ್ಲಿ ಪ್ರತಿ ಚುನಾವಣೆಯೂ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಚುನಾವಣಾ ವ್ಯವಸ್ಥೆ ಇಲ್ಲೇ ಹೆಚ್ಚು ಭ್ರಷ್ಟವಾಗಿದೆ. ಇದೂ ಕೂಡ ಇಲ್ಲಿನ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.
ಈ ಜಿಲ್ಲೆಗಳಲ್ಲಿ ಸ್ವೀಪ್ಸ್‌ಮಿತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮವೂ ಸಾಕಷ್ಟು ಪರಿಣಾಮಕಾರಿಯಾಗಿ ನಡೆದಿದೆ. ಯುವ ಮತದಾರರು ಅತ್ಯುತ್ಸಾಹದಿಂದಲೇ ಮತ ಚಲಾವಣೆ ಮಾಡಿರುವುದೂ ಮತದಾನ ಪ್ರಮಾಣ ಏರಿಕೆಗೆ ಪೂರಕ ಅಂಶವಾಗಿದೆ.
3 ಜಿಲ್ಲೆಗಳ ಬೆಸುಗೆ: ಚಿಕ್ಕಬಳ್ಳಾಪುರವು ಕೋಲಾರದಿಂದ, ರಾಮನಗರವು ಬೆಂಗಳೂರು ಗ್ರಾಮಾಂತರದಿಂದ 2007ರಲ್ಲಿ ಒಂದೇ ಬಾರಿ ಪ್ರತ್ಯೇಕಗೊಂಡ ಹೊಸ ಜಿಲ್ಲೆಗಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಕೊಂಡಿದೆ.
ರಾಮನಗರ ಜಿಲ್ಲೆಯನ್ನು ಒಳಗೊಂಡ ಲೋಕಸಭಾ ಕ್ಷೇತ್ರವು ಬೆಂಗಳೂರು ಗ್ರಾಮಾಂತರದ ಹೆಸರಿನಲ್ಲಿದೆ. ಅಂತೆಯೇ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಇಡೀ ಹೋಬಳಿಯು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಸೇರಿದೆ. ಹೀಗೆ ಮೂರು ಜಿಲ್ಲೆಗಳ ಬೆಸುಗೆ ಇದೆ.



-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement