ಬದುಕು ಕಸಿದುಕೊಳ್ಳಲು ಮುಂದಾದ ಗಜಪಡೆ
ಚನ್ನಪಟ್ಟಣ: ಇದುವರೆಗೆ ಕೇವಲ ರೈತರ ಬೆಳೆಗಳನ್ನಷ್ಟೇ ಹಾಳು ಮಾಡುತ್ತಿದ್ದ ಗಜಪಡೆ ಇದೀಗ ರೈತರ ಬದುಕನ್ನೂ ಕಸಿದುಕೊಳ್ಳಲು ಮುಂದಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ನಡೆಯುತ್ತಿರುವ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಅರಳಾಳು ಸಂದ್ರದ ಬಲಿಯೊಂದಿಗೆ ರಕ್ತ ಚರಿತ್ರೆಯ ಹಾದಿ ಹಿಡಿದಿದೆ.
ತಾಲೂಕಿನ ತೆಂಗಿನ ಕಲ್ಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ
ಆನೆಗಳ ಹಾವಳಿ ನಿತ್ಯ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಮುತ್ತತ್ತಿ ವನ್ಯಜೀವಿ ಅರಣ್ಯಕ್ಕೆ ಹೊಂದಿ ಕೊಂಡಿರುವ ತಾಲೂಕಿನ ತೆಂಗಿನ ಕಲ್ಲು ಅರಣ್ಯ ದಂಚಿನ ಗ್ರಾಮಗಳಲ್ಲಿ ಕಳೆದ ಏಳು ವರ್ಷದಿಂದೀಚಿಗೆ 500ಕ್ಕೂ ಹೆಚ್ಚುಬಾರಿ ಆನೆದಾಳಿ ನಡೆದೆ.
ಈಹಿಂದೆ ರಾತ್ರಿ ವೇಳೆ ಕಾಣಿಸಿ ಕೊಳ್ಳುತ್ತಿದ್ದ ಆನೆಗಳು ಕೇವಲ ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದವು. ಕೆಲ ಸಂದರ್ಭದಲ್ಲಿ ಜಮೀನಿನಲ್ಲಿದ್ದ ರೈತರು ಆನೆದಾಳಿಯಿಂದ ಪಾರಾದ ಉದಾಹರಣೆಗಳು ಇವೆ. ಆದರೆ ಇದೇ ಮೊದಲ ಬಾರಿಗೆ ಕಾಡಾನೆ ನರಬಲಿ ಪಡೆದಿದ್ದು ಇಲ್ಲಿಯ ವರಗೆ ಉದಾಸೀನದಿಂದಿದ್ದ ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತು ಕೊಳ್ಳ ಬೇಕಿದೆ.
ಹಾದಿ ತಪ್ಪುತ್ತಿರುವ ಆನೆಗಳು: ಬೇಸಿಗೆಯ ಸಮಯದಲ್ಲಿ ಕಾವೇರಿ ವನ್ಯಜೀವಿಗಳ ಮೀಸಲು ಅರಣ್ಯದಲ್ಲಿ ಮೇವು ಮತ್ತು ನೀರಿನ ಕೊರತೆ ಕಾಣಿಸಿ ಕೊಳ್ಳುವುದರಿಂದ ಆನೆಗಳು ಸಹಜವಾಗೇ ಮೇವನ್ನರಸಿ ನಿಗದಿತ ಕಾರಿಡಾರ್ನಲ್ಲಿ ಪಯಣ ಬೆಳೆಸುತ್ತವೆ. ಇದು ಹಿಂದಿನಿಂದ ನಡೆದು ಕೊಂಡುಬಂದಿದೆಯಾದರೂ ಇತ್ತೀಚಿಗೆ ಆನೆಗಳ ಕಾರಿಡಾರ್ನಲ್ಲಿ ಮಾನವರ ಹಸ್ತಕ್ಷೇಪ ಹೆಚ್ಚಳವಾಗಿರುವ ಕಾರಣ ಆನೆಗಳು ದಿಕ್ಕುತಪ್ಪಿ ಕಾಡಂಚಿನ ಗ್ರಾಮಗಳತ್ತ ದಾಂಗುಡಿ ಇಡುತ್ತಿವೆ.
ಆನೆಗಳ ಕಾಡಿಡಾರ್ನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ, ಬೇಟೆ, ಭೂ ಒತ್ತುವರಿ ಸೇರಿದಂತೆ ಸಾಕಷ್ಟು ಮಾನವ ಚಟುವಟಿಕೆಗಳು ಆರಂಭ ಗೊಂಡಿವೆ. ಈ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಅರಣ್ಯ ಇಲಾಖೆ ಮುಲಾಜಿಗೆ ಸಿಲುಕಿ ಮೌನಕ್ಕೆ ಶರಣಾಗಿರುವ ಪರಿಣಾಮ ಅಮಾಯಕ ರೈತರು ಜೀವ ಮತ್ತು ಜೀವನಗಳೆರಡನ್ನೂ ಕಳೆದು ಕೊಳ್ಳುವಂತಾಗಿದೆ.
5ಲಕ್ಷಪರಿಹಾರ: ಆನೆ ದಾಳಿಯಿಂದ ಸಾವಿಗೀಡಾಗಿರುವ ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡುವುದಾಗಿ ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ. ಈಗಾಗಲೇ ದಾರಿತಪ್ಪಿ ಬಂದಿರುವ ಆನೆಯನ್ನು
ಸುರಕ್ಷಿತವಾಗಿ ಆನೆಗಳ ಕಾರಿಡಾರ್ಗೆ ತಲುಪಿಸಲಾಗಿದ್ದು, ಬೇಸಿಗೆ ಸಮಯದಲ್ಲಿ ಆನೆಗಳು ಇತ್ತಬರುವುದು ಸಹಜ. ಆದರೆ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿರುವ ಅವರು ಬೆಳೆ ಹಾನಿಗೆ ಎಪಿಎಂಸಿ ದರದನ್ವಯ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ ಎಂದು ತಿಳಿಸಿದ್ದಾರೆ.
ಶಾಶ್ವತ ಪರಿಹಾರ ನೀಡಿ: ಕಳೆದ 7 ವರ್ಷಗಳಿಂದ ಅರಣ್ಯದಂಚಿನಲ್ಲಿ ಭೂಮಿ ಇರುವ ರೈತರು ಏನೂ ಬೆಳೆಯಲು ಸಾಧ್ಯವಾಗುತ್ತಿಲ್ಲ, ಅರಣ್ಯ ಇಲಾಖೆ ಆನೆದಾಳಿ ನಿಯಂತ್ರಣ ಮಾಡಿ ಈ ರೈತರಿಗೆ ಬದುಕು ಕಟ್ಟಿ ಕೊಡಲಿ, ಇಲ್ಲವಾದರೆ ಈ ಭೂಮಿಗಳನ್ನು ತಮ್ಮ ಇಲಾಖೆಯ ವಶಕ್ಕೆ ತೆಗೆದುಕೊಂಡು ಆನೆಗೆ ಬೇಕಾದ ಮೇವು ಬೆಳೆದು ಕೊಳ್ಳಲಿ, ರೈತರಿಗೆ ಇಲಾಖೆಯಲ್ಲಿ ಯಾವುದಾದರೂ ಕೆಲಸ ನೀಡಲಿದ ಎಂದು ರೈತಸಂಘದ ಸಿ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.