ಮುತ್ಯಾಲಮ್ಮ ಜಾತ್ರೆಗೆ ಸಂಭ್ರಮದ ಚಾಲನೆ
ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿರುವ ನಗರದೇವತೆ ಶ್ರೀಮಾತೆ ಮುತ್ಯಾಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸಂಭ್ರಮದ ಚಾಲನೆ ದೊರೆತಿದೆ. ಶ್ರೀಮಾತೆಗೆ ಏಳೂರ ಗ್ರಾಮಸ್ಥರು ವಿಶೇಷ ಆರತಿಗಳನ್ನು ಸಮರ್ಪಿಸಿ, ಶ್ರೀ ಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಶ್ರೀಮಾತೆಯ ರಥೋತ್ಸವ ವಿಜೃಂಭಣೆಯಿಂದ ನಡೆದಿದೆ.
ದೇವಾಲಯದ ನೂತನ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪುನಃ ಪ್ರತಿಷ್ಠಾಪನೆ, ಆಲಯ ಗೋಪುರ ಕಳಶ ಕುಂಭಾಭಿಷೇಕ ನಡೆದ ನಂತರ ನಡೆಯುತ್ತಿರುವ ಮೊದಲ ಜಾತ್ರಾ ಕಾರ್ಯಕ್ರಮ ಇದಾಗಿದ್ದು, ಭಕ್ತಾದಿಗಳು ಅತೀವ ಉತ್ಸಾಹಕ್ಕೆ ಕಾರಣವಾಗಿತ್ತು. ಜಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿದ್ದು, ದೇಗುಲದಲ್ಲಿ ಭಕ್ತಿ ವೈಭವ ಮನೆ ಮಾಡಿತ್ತು. ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ರೋಜಿಪುರ ಮತ್ತು ನಾಗಸಂದ್ರ ಗ್ರಾಮದ ಜನ ಮುತ್ಯಾಲಮ್ಮದೇವಿಯ ವಿಶೇಷಾರಾಧಕರಾಗಿದ್ದು, ರೋಜಿಪುರ ಶ್ರೀಮಾತೆಯ ತವರು ಎಂಬ ಪ್ರತೀತಿ ಇದೆ. ಹೀಗಾಗಿಯೇ ಜಾತ್ರಾ ಮೆರವಣಿಗೆ ಸಾಂಪ್ರದಾಯಿಕವಾಗಿ ರೋಜಿಪುರಕ್ಕೆ ತೆರಳಿ ಹಿಂತಿರುಗಿತು.
ಆರತಿ ಸಮರ್ಪಣೆ: ಶ್ರೀಮಾತೆಗೆ ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಆರತಿಗಳನ್ನುಸಮರ್ಪಿಸಿದರು. ಹೊಂಬಾಳೆಯ ಆರತಿ, ತಂಬಿಟ್ಟಿನಾರತಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲ್ಪಟ್ಟ ಆರತಿಗಳನ್ನು ಮಾತೆಗೆ ಬೆಳಗಿ ಹರಕೆ ತೀರಿಸಿದರು. ದೂರದ ಪ್ರದೇಶಗಳಿಂದ ಕೂಡ ಜನ ಆಗಮಿಸಿ ಮುತ್ಯಾಲಮ್ಮ ದರ್ಶನ ಪಡೆದದ್ದು ವಿಶೇಷವಾಗಿತ್ತು. ಶ್ರೀಮಾತೆ ಸಂಕಟ ನಿವಾರಣೆ ಮತ್ತು ಪಿಡುಗು ನಿವಾರಣೆಯ ಶಕ್ತಿದೇವತೆಯಾಗಿ ಆರಾಧಿಸಲ್ಪಡುತ್ತಿದ್ದಾಳೆ.
ವಿಶೇಷಾಲಂಕರ: ದೇವಾಲಯದಲ್ಲಿ ಶ್ರೀಮಾತೆಗೆ ವಿಶೇಷ ಮುತ್ತಿನ ಅಲಂಕಾರ ಮಾಡಲಾಗಿತ್ತು. ಅಲ್ಲದೆ ದೇವಾಲಯ ಆವರಣವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಶ್ರೀದೊಡ್ಡಮ್ಮ ಉತ್ಸವ, ಕುಕ್ಕಲಮ್ಮ ವಿಶೇಷ ಪೂಜೆ ಸೇರಿದಂತೆ ಹಲವು ವಿಶೇಷತೆಗಳು ಗಮನಸೆಳೆದವು. ರಥೋತ್ಸವದಲ್ಲಿ ಸಾಂಸ್ಕೃತಿಕ ತಂಡಗಳು ವಿಶೇಷ ಆಕರ್ಷಣೆಯಾಗಿದ್ದವು. ಶ್ರೀಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.