ಹೈಕಲ್ ಕಾರ್ಖಾನೆಗೆ ಬೆಂಕಿ
ಆನೇಕಲ್ಲು: ಬೆಂಗಳೂರು ದಕ್ಷಿಣ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಬಹುರಾಷ್ಟ್ರೀಯ ಕಂಪನಿ ಹೈಕಲ್ ಕೆಮಿಕಲ್ ಗೋದಾಮಿನಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದೆ.
ಗೋದಾಮಿನಲ್ಲಿ ಔಷಧ ತಯಾರಿಕೆಗೆ ಬೇಕಾದ ರಾಸಾಯನಿಕ ವಸ್ತುಗಳಿದ್ದು ಬೆಂಕಿ ತಗಲಿ ಆಗಸದೆತ್ತರಕ್ಕೆ ಉರಿಯುತ್ತಿತ್ತು. ದಾಸ್ತಾನು ಮಾಡಲಾಗಿದ್ದ ಡ್ರಂಗಳು ಸ್ಫೋಟಗೊಂಡು ಸಿಡಿಯುತ್ತಿದ್ದವು. 10ಕ್ಕೂ ಹೆಚ್ಚು ಅಗ್ನಿ ಶ್ಯಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಲು ಹರ ಸಾಹಸ ಪಟ್ಟವು. ಒಂದು ಗಂಟೆಗೂ ಹೆಚ್ಚು ಕಾಲ ಈ ಘಟನೆ ವೀಕ್ಷಿಸಿದ ಸಾರ್ವಜನಿಕರು ಗಾಬರಿಯಾದರು.
ಕೆಮಿಕಲ್ ಕಂಪನಿ ಹಾಗೂ ಗೋದಾಮು ಅಮೆರಿಕಾ ಮೂಲದ ಒಡೆತನಕ್ಕೆ ಸೇರಿದ್ದು ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆ (ಆಡಿಟಿಂಗ್) ನಡೆದಿತ್ತು. ಮಂಗಳವಾರ ಸಭೆಯು ಮುಂದುವರಿಯಬೇಕಿತ್ತು. ಮುಂಜಾನೆ ಸಂಭವಿಸಿದ ಅಗ್ನಿ ಅವಘಡ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆಡಳಿತ ಮಂಡಳಿ ಅಥವಾ ಕಾರ್ಮಿಕರ ಗುಂಪು ಅಗ್ನಿ ಅವಘಡಕ್ಕೆ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಜಿಗಣಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿದ್ದಾರೆ.
ನಷ್ಟದ ಅಂದಾಜು ನಿಖರವಾಗಿ ತಿಳಿಸಲು ಜವಾಬ್ದಾರಿಯುತ ವ್ಯಕ್ತಿಗಳು ಕಂಪನಿ ಬಳಿ ಸಿಗಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ನಕಲಿ ಅಂಕಪಟ್ಟಿ ಹಾವಳಿ; ವರದಿ ಕೇಳಿದ ಶಿಕ್ಷಣ ಸಚಿವ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಅಂಕ ತಿದ್ದುಪಡಿ ಪ್ರಕರಣ ಕುರಿತಂತೆ ವರದಿ ನೀಡುವಂತೆ ವಿವಿ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಆದೇಶಿಸಿದ್ದಾರೆ.
ವಿಶ್ವವಿದ್ಯಾಲಯದ ಸಿಬ್ಬಂದಿಗಳ ಕೈವಾಡದಿಂದಲೇ ಅಂಕಪಟ್ಟಿ ತಿದ್ದುಪಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದೇನೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, 3 ದಿನಗಳಲ್ಲಿ ವಿವಿ ಕುಲಪತಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಖುದ್ದು ವರದಿ ಕೇಳಿದ್ದೇನೆ. ಆ ಬಳಿಕ ರಾಜ್ಯ ಸರ್ಕಾರ ತುರ್ತು ಕ್ರಮ ಜರುಗಿಸಲಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಏತನ್ಮಧ್ಯೆ ಅಂಕಪಟ್ಟಿ ಅಕ್ರಮ ಕುರಿತಂತೆ ಸಿಂಡಿಕೇಟ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಮಧ್ಯಾಂತರ ವರದಿ ಕೇಳಲಾಗಿದೆ. ಏ.25ರಂದು ನಡೆಯಲಿರುವ ಸಿಂಡಿಕೇಟ್ ಸಭೆಯಲ್ಲಿ ಈ ಪ್ರಕರಣ ಕುರಿತು ನಿರ್ಣಯ ತೆಗೆದುಕೊಳ್ಳಲು ಕುಲಪತಿ ನಿರ್ಧರಿಸಿದ್ದಾರೆ.
ಇದಕ್ಕೂ ಮುಂಚೆ ಬೆಂಗಳೂರು ವಿವಿಯಲ್ಲಿ ನಕಲಿ ಅಂಕಪಟ್ಟಿ ಹಾವಳಿ ಹೆಚ್ಚಾಗಿತ್ತು. ಆದರೆ ಈಗ ಅಧಿಕೃತ ಪ್ರಮಾಣಪತ್ರದಲ್ಲಿ ಅಂಕವನ್ನೇ ತಿದ್ದುತ್ತಿರುವುದು ವಿವಿಯ ಚಿಂತೆಗೆ ಕಾರಣವಾಗಿದೆ. ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ವಿಶೇಷ ಕಾರ್ಯಪಡೆಯ ರಚಿಸುವ ಬಗೆಗೂ ಚಿಂತಿಸಲಾಗುತ್ತಿದೆ.
ಮೇಕೆದಾಟು: ರಾಜ್ಯದ ಹಿತಕ್ಕೆ ಬದ್ಧ
ಬೆಂಗಳೂರು: ಮೇಕೆದಾಟು ಜಲ ವಿದ್ಯುತ್ ಯೋಜನೆ ಪ್ರಕರಣ ಸಂಬಂಧ ರಾಜ್ಯದ ಹಿತ ಕಾಯಲು ಸರ್ಕಾರ ಬದ್ಧ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ ಅವರು ನೀಡಿರುವ ಹೇಳಿಕೆ ಅತ್ಯಂತ ಬಾಲಿಶ. ರಾಜ್ಯದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಇಚ್ಛೆ ಅವರಿಗೆ ಇದ್ದಿರಬಹುದು. ಆದರೆ ಸರ್ಕಾರಕ್ಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ನ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಸೋಲು- ಗೆಲುವು ಮತದಾರನ ಕೈಲ್ಲಿದೆ. ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಆಗಾಗ ನನ್ನ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ 1 ಮತಗಳ ಅಂತರದಿಂದಾರೂ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂಟಿ ಸಲಗ ದಾಳಿ: ವ್ಯಕ್ತಿಗೆ ಗಾಯ
ಕನಕಪುರ: ಕನಕಪುರ ತಾಲೂಕು ಸಾತನೂರು ಹೋಬಳಿ ಕೋಣಗುಂದಿ ಸಮೀಪ ಒಂಟಿ ಸಲಗ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಕೋಣಗುಂದಿ ಗ್ರಾಮದ ರಾಮಜೋಗಯ್ಯ (58) ಎಂದು ಗುರುತಿಸಲಾಗಿದೆ. ರಾಮಜೋಗಯ್ಯ ನಿನ್ನೆ ತನ್ನ ಮನೆಯಿಂದ ಕನಕಪುರಕ್ಕೆ ಮದುವೆಯೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಹರಿಹರ ಸಮೀಪದ ಹಂದಿಹಳ್ಳ ಸ್ಥಳದಲ್ಲಿ ಇಳಿಯುತ್ತಿದ್ದಾಗ ಪೊದೆಯ ಮರೆಯಲ್ಲಿದ್ದ ಒಂಟಿ ಸಲಗವೊಂದು ಹಠಾತ್ ದಾಳಿ ನಡೆಸಿದೆ. ಆನೆಯ ದಾಳಿಯಲ್ಲಿ ಕಾಲು ಮುರಿದಿದ್ದು ಪಕ್ಕೆಲುಬುಗಳಿಗೆ ಪೆಟ್ಟಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಸುನೀತಾಬಾಯಿ ಭೇಟಿ ನೀಡಿ ಪರಿಶೀಲಿಸಿದರು. ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಟ್ಟದ ಹಲಸೂರಿನಲ್ಲಿ ಜಾತ್ರಾ ಮಹೋತ್ಸವ
ಕನಕಪುರ: ರಾಜ್ಯದಲ್ಲಿಯೇ ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದವರಿಗಾಗಿ ನಡೆಯುವ ಬೃಹತ್ ಜಾತ್ರಾ ಮಹೋತ್ಸವ ಕನಕಪುರ ತಾಲೂಕಿನ ಬೆಟ್ಟದ ಹಲಸೂರು ಗ್ರಾಮದಲ್ಲಿ ನಡೆಯಿತು.
ಹಲವಾರು ದಶಕಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಸೇಂಟ್ ಆಂಥೋನಿ ಜಾತ್ರೆಯಲ್ಲಿ ನೆರೆಹೊರೆಯ ಜಿಲ್ಲೆಗಳು ಬೆಂಗಳೂರು ಹಾಗೂ ನೆರೆ ರಾಜ್ಯಗಳಿಂದಲೂ ಹತ್ತಾರು ಸಾವಿರ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ತೀರಿಸಿ ಮುಡಿಕೊಡುವ ಸಂಪ್ರದಾಯ ಜಾರಿಯಲ್ಲಿದೆ. ಹಿಂದೂ ಸಮುದಾಯದವರೂ ಈ ಚರ್ಚ್ಗೆ ಹರಕೆ ಕಟ್ಟಿಕೊಂಡು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡಿದ್ದಾರೆ. ಹಾಗಾಗಿ ಹಲಸೂರು ಜಾತ್ರೆ ಸರ್ವಧರ್ಮ ಸಮನ್ವಯದ ಹಬ್ಬವಾಗಿದೆ.
ಜಾತ್ರೆಗೆ ಬಂದ ಜನರು ಇಲ್ಲಿನ ಹೊಲಗಳಲ್ಲಿಯೇ ಜಾತಿಭೇದ, ಮೇಲುಕೀಳೆನ್ನದೆ ಬೀಡುಬಿಟ್ಟು ಅಡುಗೆ ಮಾಡಿಕೊಂಡು ಬಂದವರೊಡನೆ ಹಂಚಿತಿಂದು ಹರಕೆ ಸಲ್ಲಿಸುವುದು ವಿಶೇಷವಾಗಿದೆ. ಹಲಸೂರು ಜಾತ್ರೆಗೆ ಬಂದ ಜನರು ಕನಕಪುರ ತಾಲೂಕಿನ ಮತ್ತೆರಡು ಪ್ರಸಿದ್ಧ ಚರ್ಚ್ಗಳಾದ ಹಾರೋಬೆಲೆ ಹಾಗೂ ಥೆರೇಸಾಪುರ ಚರ್ಚ್ಗಳಿಗೆ ಭೇಟಿ ನೀಡಿ ತೆರಳುವುದು ವಿಶೇಷವಾಗಿದೆ.
ಯುವಕ, ಯುವತಿಯರಿಗೆ ವಿವಿಧ ತರಬೇತಿಗೆ ಆಹ್ವಾನ
ರಾಮನಗರ: ಬಿಡದಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎ.ಡಿ.ಪೈ. ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯು ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ವಿವಿಧ ತರಬೇತಿಗಳನ್ನು ಆಯೋಜಿಸಿದೆ.
ಯುವತಿಯರಿಗಾಗಿ 30 ದಿನಗಳ ಬ್ಯೂಟಿ ಪಾರ್ಲರ್ ತರಬೇತಿಯು ಮೇ 5ರಿಂದ ಹಾಗೂ 21 ದಿನಗಳ ಟೈಲರಿಂಗ್ ತರಬೇತಿಯು ಮೇ 12ರಿಂದ ಪ್ರಾರಂಭವಾಗಲಿದೆ. ಯುವಕರಿಗಾಗಿ 30 ದಿನಗಳ ಮೊಬೈಲ್ ರಿಪೇರಿ ತರಬೇತಿಯು ಮೇ.19ರಿಂದ ಹಾಗೂ 15 ದಿನಗಳ ಡ್ರೈವಿಂಗ್ ತರಬೇತಿಯು ಮೇ 26ರಿಂದ ಪ್ರಾರಂಭವಾಗಲಿದೆ.
ಆಸಕ್ತ ಅಭ್ಯರ್ಥಿಗಳು ಕನಿಷ್ಟ 7ನೇ ತರಗತಿ ಪಾಸಾಗಿದ್ದು, 18 ರಿಂದ 35ವರ್ಷದೊಳಗಿರಬೇಕು. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ತರಬೇತಿ ವೇಳೆ ಊಟ, ವಸತಿ ಸೌಲಭ್ಯ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ತಮ್ಮ ಇತ್ತೀಚಿನ 3 ಭಾವಚಿತ್ರ, ಓಟರ್ ಐಡಿ, ಪಡಿತರ ಚೀಟಿ ಹಾಗೂ ಅಂಕಪಟ್ಟಿಯ ನಕಲಿನೊಂದಿಗೆ ನೇರವಾಗಿ ಸಂಸ್ಥೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ನಿರ್ದೇಶಕರು ಮೊ.9740648430, ಕಾರ್ಯಕ್ರಮದ ಸಂಯೋಜಕರು ಮೊ.9900168985 ಅಥವಾ ಖುದ್ದಾಗಿ ಕೆನರಾ ಬ್ಯಾಂಕ್ ಎ.ಡಿ.ಪೈ. ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ, ಬೆಂಗಳೂರು-ಮೈಸೂರು ಹೆದ್ದಾರಿ, ವಂಡರ್ ಲಾ ಹಾಗೂ ಬಿಡದಿಯ ಮಧ್ಯ ಭಾಗದಲ್ಲಿ ಲಕ್ಷ್ಮೀಸಾಗರ ಗೇಟ್, ವಾಜರಹಳ್ಳಿ, ಬಿಡದಿ ಹೋಬಳಿ, ರಾಮನಗರ ಜಿಲ್ಲೆ-562109 ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ಬಿ.ಪಿ.ಕಿಣಿ ತಿಳಿಸಿದ್ದಾರೆ.
'ಸಹಕಾರಿ ವ್ಯವಸ್ಥೆಗೆ ಕಳಂಕ ಹಚ್ಚುತ್ತಿದ್ದಾರೆ ಬೋರ್ವೆಲ್ ರಾಮಚಂದ್ರು'
ಚನ್ನಪಟ್ಟಣ: ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಕ್ಕೆ ವಿರುದ್ಧವಾಗಿ ಒಂದೇ ದಿನದಲ್ಲಿ ನೂರು ಶೇರುಗಳನ್ನು ಮಾಡಿಸುವ ಮೂಲಕ ಅಕ್ರಮವಾಗಿ ಚುನಾವಣೆಯಲ್ಲಿ ಗೆದ್ದಿರುವ ಬೋರ್ವೆಲ್ ರಾಮಚಂದ್ರು ತಾಲೂಕಿನ ಸಹಕಾರಿ ವ್ಯವಸ್ಥೆಗೆಕಳಂಕ ಹಚ್ಚುತ್ತಿದ್ದಾರೆ ಎಂದು ಹೊಟ್ಟಿಗನ ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಉತ್ಪಾದಕರು, ಇತ್ತೀಚಿಗೆ ನಡೆದ ಆಡಳಿತ ಮಂಡಲಿ ಚುನಾವಣೆಯ ಪರಾಜಿತ ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಅವರು, ನಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿರುವ ರಾಮಚಂದ್ರು ಸಂಘದ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದು ಅವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಸಹಕಾರಿ ತತ್ವಗಳಿಗೆ ಕೊಡಲಿ ಪೆಟ್ಟು ನೀಡಿರುವ ಅವರ ವಿರುದ್ಧ ಸಹಕಾರ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಸಹಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಕನಿಷ್ಠ 180 ದಿನ ಹಾಲು ಪೂರೈಸಬೇಕಿದೆ.
ಅಂತಹ ಸದಸ್ಯರು ಸದಸ್ಯತ್ವ ಪಡೆಯಲು ಅರ್ಜಿಯನ್ನು ನೀಡಿದ ನಂತರ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿ ಸದಸ್ಯತ್ವವನ್ನು ನೀಡುವಂತೆ ಬೈಲಾ ನಿಯಮವು ಸ್ಪಷ್ಟಪಡಿಸಿದೆ.