ಹೊಸತನ್ನು ಶೋಧಿಸುವ ಮನೋಭಾವ ಮುಖ್ಯ
ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ನೇತೃತ್ವದಲ್ಲಿ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮಂಗಳವಾರ ಆರಂಭವಾಯಿತು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಇತ್ತೀಚಿನ ಸಂಶೋಧನೆಗಳ ಕುರಿತು ನಡೆಯುತ್ತಿರುವ ವಿಚಾರ ಸಂಕಿರಣವನ್ನು ಡಾ.ಎಂ.ಎಚ್.ಕೋರಿ ಉದ್ಘಾಟಿಸಿದರು.
ಅವರು ಮಾತನಾಡಿ, ಜಾಗತಿಕವಾಗಿ ಆಗುತ್ತಿರುವ ಮಹತ್ವದ ಬದಲಾವಣೆಗಳತ್ತ ವಿದ್ಯಾರ್ಥಿಗಳು ಆಕರ್ಷಿತರಾಗಬೇಕು. ಇಂದಿನ ತಾಂತ್ರಿಕ ಮತ್ತು ಸಂವಹನ ಕ್ರಾಂತಿಯ ಯುಗದಲ್ಲಿ ಬೆಳವಣಿಗೆಗಳು ಬದಲಾವಣೆಗಳಾಗಿರುತ್ತವೆಯೇ ವಿನಃ ಕೇವಲ ಬೆಳವಣಿಗಳಾಗಿರಬಾರದು. ಹೊಸತನ್ನು ಶೋಧಿಸುವ ಮನೋಭಾವ ಎಲ್ಲರಲ್ಲೂ ಇರಬೇಕು. ಅದರಲ್ಲೂ ಮುಖ್ಯವಾಗಿ ಅತ್ಯಂತ ಸೂಕ್ಷ್ಮಗ್ರಾಹಿ ವಿಜ್ಞಾನ ವಿಚಾರಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿ ಮತ್ತು ಬೋಧಕರಲ್ಲಿ ಸಮಕಾಲೀನ ವಿಚಾರವಂತಿಕೆಯ ಸಂದರ್ಭೋಚಿತ ಮಾಹಿತಿ ಇದ್ದರೆ ಒಳ್ಳೆಯದು ಎಂದರು.
ಇಂದು ವಿಜ್ಞಾನದ ಅಧ್ಯಯನದ ರೀತಿನೀತಿಗಳು ಸಡಿಲಗೊಂಡಿವೆ. ಅನ್ವಯಿಕ ದೃಷ್ಟಿಕೋನದಲ್ಲಿ ನಾವು ವಿಚಾರವನ್ನು ಗ್ರಹಿಸುತ್ತಿಲ್ಲ. ಹೀಗಾಗಿ ಕೌಶಲ ಆಧಾರಿಕ ವೈಜ್ಞಾನಿಕ ಚಿಂತನೆಗಳಿಗೆ ಅವಕಾಶ ದೊರೆಯುತ್ತಿಲ್ಲ. ಬಹುಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದಲ್ಲಿ ಬದಲಾವಣೆಯ ಅಲೆಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ಅದರ ದಿಕ್ಕುದೆಸೆಗಳನ್ನು ನಿರ್ಧರಿಸುವ ವೈಚಾರಿಕ ಪ್ರಜ್ಞೆ ಬರಬೇಕಿದೆ ಎಂದರು.
ದೇಶದ ಮಹತ್ವದ ಉದ್ಯೋಗದಾಯಿ ಕ್ಷೇತ್ರಗಳಲ್ಲಿ ಇದೂ ಒಂದಾಗಿದ್ದು, ಯುವಕರು ಮತ್ತು ಯುವತಿಯರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಆಕರ್ಷಣೆ ಕೇವಲ ಆಕರ್ಷಣೆಯಾಗಿರದೆ ಕ್ಷೇತ್ರದ ಹೊಣೆಯಾಧಾರಿತ ಬೆಳವಣಿಗೆಗೆ ಸಹಕಾರಿಯಾಗಬೇಕಾದ ಅನಿವಾರ್ಯತೆ ಕಂಡು ಬರುತ್ತಿದೆ. ಅದಕ್ಕೆ ಈ ಬಗೆಯ ವಿಚಾರ ಸಂಕಿರಣಗಳು ದಿಕ್ಸೂಚಿಯಾಗಬೇಕು ಎಂದರು.ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾ ಸಂಸ್ಥೆಯ ಸಿಇಓ ಎಸ್.ಎಲ್.ಗಂಗಾಧರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಜೆ.ರಾಜೇಂದ್ರ, ಪ್ರಾಂಶುಪಾಲ ಡಾ.ಎ.ಎನ್. ನಂದಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿದ್ಯಾರ್ಥಿ ಫೋರಂ ಆರಂಭ: ಇದೇ ಸಂದರ್ಭದಲ್ಲಿ ಐಇಸಿಇ ವಿದ್ಯಾರ್ಥಿಗಳ ಫೋರಂ ಉದ್ಘಾಟನೆಗೊಂಡಿತು. ಐಇಟಿಇ ನಿವೃತ್ತ ಮಾಜಿ ಅಧ್ಯಕ್ಷ ಎಚ್.ಆರ್.ಪಾರ್ಥಸಾರಥಿ, ಐಇಟಿಇ ಖಜಾಂಚಿ ಪ್ರೊ.ಜಿ.ಕೆ.ವೆಂಕಟೇಶ್ ಮುಖ್ಯ ಅತಿಥಿಗಳಾಗಿದ್ದರು. ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮ ಬುಧವಾರ ಮಧ್ಯಾಹ್ನ ನಡೆಯಲಿದೆ.