ಗವಿನಾಗಮಂಗಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ
ಮಾಗಡಿ: ತಾಲೂಕಿನ ಗವಿನಾಗಮಂಗಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮ ದೇವತೆ ಮಾರಮ್ಮದೇವಿ ಮತ್ತು ಬಸವೇಶ್ವರಸ್ವಾಮಿ ದೇವರಿಗೆ ಅಗ್ನಿ ಕೊಂಡೋತ್ಸವ ನಡೆಯಿತು. ಇದೇ ವೇಳೆ ಗ್ರಾಮದ ಮಹಿಳೆಯರು ದೇವಿಗೆ ತಂಬಿಟ್ಟಿನಾರತಿ ನೈವೇದ್ಯ ಅರ್ಪಿಸಿ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿ ಭಕ್ತಿಭಾವ ಮೆರೆದರು. ಗುರುವಾರ ರಾತ್ರಿ ಶ್ರೀವಿನಾಯಕಸ್ವಾಮಿ ಕೃಪಾ ಪೋಷಿತ ನಾಟಕ ಮಂಡಲಿ ವತಿಯಿಂದ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.
ನೀರಿಗಾಗಿ ಪರದಾಟ: ಗವಿನಾಗಮಂಗಲ ಜಾತ್ರಾ ಮಹೋತ್ಸವಕ್ಕೆ ನೀರು ಪೂರೈಕೆ ಇಲ್ಲದ ಕಾರಣ ಗ್ರಾಮದ ಮಹಿಳೆಯರು ನೀರಿಗಾಗಿ ಪರದಾಡುತ್ತಿದ್ದರು. ಕೆಲ ಮುಖಂಡರು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿಕೊಂಡು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಅತ್ತಿಂಗೆರೆಯಲ್ಲಿ ಊರ ಹಬ್ಬ: ತಾಲೂಕಿನ ಅತ್ತಿಂಗೆರೆಯಲ್ಲಿ ಊರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಸುತ್ತಮುತ್ತಲ ಗ್ರಾಮಸ್ಥರು ಊರ ಹಬ್ಬದಲ್ಲಿ ಭಾಗವಹಿಸಿ ಭಕ್ತಿ ಭಾವ ಮೆರೆದರು. ಹೊಂಬಾಳಮ್ಮನಪೇಟೆಯಲ್ಲಿಯೂ ಊರು ಹಬ್ಬ ಏರ್ಪಡಿಸಲಾಗಿತ್ತು. ಸಂಜೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು.