ಜೆಡಿಎಸ್ಗೆ ಆಪರೇಷನ್ ಹಸ್ತ ಭೀತಿ
ಕ.ಪ್ರ.ವಾರ್ತೆ ರಾಮನಗರ ಏ.23
ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೂರನೇ 20 ತಿಂಗಳ ಅವಧಿಗೆ ಮೀಸಲಾತಿ ಪ್ರಕಟಗೊಂಡಿದ್ದು, ಆಪರೇಷನ್ ಹಸ್ತ ಕಾರ್ಯಾಚರಣೆಯ ಭೀತಿ ಜೆಡಿಎಸ್ ಪಾಳಯವನ್ನು ಕಾಡಲಾರಂಭಿಸಿದೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪ್ರಸ್ತುತ ಅವಧಿಯ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ ಜೂ.16ಕ್ಕೆ ಅಂತ್ಯಗೊಳ್ಳಲಿದೆ.
ಜೆಡಿಎಸ್ಗೆ ಸವಾಲು: 22 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 12 ಮತ್ತು ಕಾಂಗ್ರೆಸ್ 10 ಸದಸ್ಯ ಬಲ ಹೊಂದಿವೆ. ಕೂಟಗಲ್ ಕ್ಷೇತ್ರದ ಸದಸ್ಯೆ ಮಂಜುಳ ಮರಿದೇವರು ಸದಸ್ಯತ್ವ ಅನೂರ್ಜಿತಗೊಳಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಜೆಡಿಎಸ್ನ ಸುಮಿತ್ರಮ್ಮ ಅವರನ್ನು ವಿಜೇತೆ ಎಂದು ಘೋಷಿಸಿದೆ.
ಈ ಪ್ರಕರಣವೀಗ ಹೈಕೋರ್ಟ್ ಮೆಟ್ಟಿಲೇರಿದೆ. ಒಂದೊಮ್ಮೆ ಅಲ್ಲಿಯೂ ಅಧೀನ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದರೆ ಜೆಡಿಎಸ್ ಬಲ 13ಕ್ಕೆ ಏರಲಿದ್ದು, ಕಾಂಗ್ರೆಸ್ ಸದಸ್ಯರ ಸಂಖ್ಯೆ 9ಕ್ಕೆ ಕುಸಿಯಲ್ಪಡುತ್ತದೆ. ಆಗ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಸಾಕಷ್ಟು ತ್ರಾಸ ಎದುರಿಸಬೇಕಾಗುತ್ತದೆ.
ಹೈಕೋರ್ಟ್ನಲ್ಲಿ ತೀರ್ಪು ಕಾಂಗ್ರೆಸ್ ಸದಸ್ಯೆ ಮಂಜುಳ ಪರ ಬಂದರೆ, ಉಭಯ ಪಕ್ಷಗಳ ನಡುವಿನ ಅಂತರ ಕೇವಲ 2 ಆಗುತ್ತದೆ. ಆಗ ಜೆಡಿಎಸ್ ಒಡಕಿನ ಲಾಭದೊಂದಿಗೆ ಅಧಿಕಾರ ಹಿಡಿಯುವ ಕಾಂಗ್ರೆಸ್ ಹಾದಿ ಕೊಂಚ ಸುಗಮವಾಗಲಿದೆ ಎನ್ನುವ ಮಾತು ಅಲ್ಲಗಳೆಯುವಂತಿಲ್ಲ.
ಅಸಮಾಧಾನದ ಕುದಿ: ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಜಾರಿಯಲ್ಲಿ ಸಾಕಷ್ಟು ಗೊಂದಲವೇರ್ಪಟ್ಟಿದೆ. ಮೊದಲ 20 ತಿಂಗಳು ಮತ್ತು ಎರಡನೇ 20 ತಿಂಗಳ ಅಧ್ಯಕ್ಷ ಸ್ಥಾನವನ್ನು ತಲಾ ಮೂವರಿಗೆ ಹಂಚಿಕೆ ಮಾಡಲಾಗಿತ್ತು. ಮೊದಲ ಅವಧಿಯಲ್ಲಿ ನಾಗೇಶ್ವರಿ ರಾಮಚಂದ್ರ ಬಂಡಾಯದಿಂದ ಜೆಡಿಎಸ್ ಮುಖಭಂಗ ಅನುಭವಿಸಿತ್ತು.
ಕಡೆಗೆ ನಾಗೇಶ್ವರಿ ಮತ್ತು ರಾಮಚಂದ್ರ ಅವರಿಗೆ ಕ್ಷಮಾಧಾನ ನೀಡಿದ ದಳಪತಿಗಳು ಸದಸ್ಯತ್ವ ಅನೂರ್ಜಿತ ಪ್ರಕರಣವನ್ನು ಹಿಂಪಡೆದಿದ್ದರು. ಎರಡನೇ 20 ತಿಂಗಳ ಅವಧಿಯಲ್ಲಿ ಸುಧಾರಾಜು ಅವರಿಗೆ ಅಧಿಕಾರ ನೀಡುವ ವಿಷಯದಲ್ಲಿ ಜೆಡಿಎಸ್ ವರಿಷ್ಠರು ವಚನ ಭ್ರಷ್ಟರಾಗಿದ್ದಾರೆ.
ಈ ಪ್ರಕರಣದಿಂದಾಗಿ ಜೆಡಿಎಸ್ ಪಾಳಯದಲ್ಲಿ ಆಂತರಿಕ ಬೇಗುದಿ ಹೆಚ್ಚಿದೆ. ಜತೆಗೆ ಕೆಲ ಜೆಡಿಎಸ್ ಸದಸ್ಯರು ಸ್ವಾರ್ಥ ಸಾಧನೆಗಾಗಿ ಆಡಳಿತಾರೂಢ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವುದು ಗುಟ್ಟಿನ ಸಂಗತಿಯೇನಲ್ಲ. ಈಗಾಗಲೇ ಜೆಡಿಎಸ್ ವಶದಲ್ಲಿದ್ದ ರಾಮನಗರ ತಾ.ಪಂ. ಮತ್ತು ಜೆಡಿಎಸ್ ಮೇಲುಗೈ ಸಾಧಿಸಿದ್ದ ಚನ್ನಪಟ್ಟಣ ನಗರಸಭೆ ಕಾಂಗ್ರೆಸ್ ವಶವಾಗಿವೆ. ಇಲ್ಲೂ ಅದೇ ರೀತಿಯ ಫಲಿತಾಂಶ ಹೊರಬಿದ್ದರೆ ಅಚ್ಚರಿಯೇನಿಲ್ಲ.
ಕುದುರೆ ವ್ಯಾಪಾರ ಸಂಭವ
ಹೇಳಿ ಕೇಳಿ ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಸಹಜವಾಗಿಯೇ ಪೈಪೋಟಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರ ನಡೆಯಬಹುದಾದ ಸಾಧ್ಯತೆ ಹೆಚ್ಚಿದೆ. ಎರಡೂ ಪಕ್ಷಗಳಲ್ಲಿ ದುಡ್ಡಿನ ಕುಳಗಳೇ ಸ್ಥಾನಾಕಾಂಕ್ಷಿಗಳಾಗುವ ಸಂಭವವುಂಟು. ಅಂತೆಯೇ ಸಾಂಪ್ರದಾಯಕ ಎದುರಾಳಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿರುವುದರಿಂದ ಜಿದ್ದಾಜಿದ್ದಿನ ಸೆಣೆಸಾಟ ನಡೆಯಲಿದೆ.
ಹುದ್ದೆ ಮೇಲೆ ಕಣ್ಣಿಟ್ಟವರು
ಜೆಡಿಎಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿಯೇ ಎದುರಾಗುವ ಸಾಧ್ಯತೆಯಿದೆ. ಮಾಗಡಿ ತಾಲೂಕಿನ ವಿಜಯಕುಮಾರ್, ಧನಂಜಯ, ರಾಮನಗರ ತಾಲೂಕಿನ ಎಚ್.ಎಲ್. ಚಂದ್ರ, ಚನ್ನಪಟ್ಟಣ ತಾಲೂಕಿನ ರಘುಕುಮಾರ್ ಅವರಾಗಲೇ ಲಾಬಿ ಶುರುವಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಇಕ್ಬಾಲ್ ಹುಸೇನ್, ರಂಗಸ್ವಾಮಿ, ತುಂಗಣಿ ವೆಂಕಟೇಶ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಎರಡೂ ಪಕ್ಷಗಳಲ್ಲಿ ಸಾಮಾನ್ಯ ಮಹಿಳಾ ಮೀಸಲಿನಡಿ ಉಪಾಧ್ಯಕ್ಷ ಸ್ಥಾನ ಗಿಟ್ಟಿಸಲು ಪೈಪೋಟಿಗೇನೂ ಕಡಿಮೆಯಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಉಭಯ ಪಕ್ಷಗಳಲ್ಲೂ ಅಧಿಕಾರ ಹಂಚಿಕೆ ಸೂತ್ರ ರಚನೆ ಬಹುತೇಕ ನಿಶ್ಚಿತ.
ಮತ್ತೀಕೆರೆ ಜಯರಾಮ್