ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಳೆ ನೀರಿನ ಕೊಯ್ಲು ಕುರಿತ ಜಾಗೃತಿ ಅನಿವಾರ್ಯ

Mainashree
Updated On : 24 Apr 2014, 12:19 pm

ದೊಡ್ಡಬಳ್ಳಾಪುರ: ಅರ್ಕಾವತಿ ಪುನಶ್ಚೇತನವಾಗಬೇಕಾದರೆ ಭೂಮಿ, ನೀರಿನ ಬಳಕೆ, ಮಳೆ ನೀರಿನ ಕೊಯ್ಲು, ಜಲಕಾಯಗಳ ದುರಸ್ಥಿ ಮುಂತಾದ ಅಂಶಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್  ಸಂಸ್ಥೆಯ ಶರತ್‌ಚಂದ್ರ ಲೀಲೆ ಹೇಳಿದರು.
ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ವಿಶ್ವ ಭೂದಿನಾಚರಣೆ ಅಂಗವಾಗಿ ನಡೆದ ಅರ್ಕಾವತಿ ಹವಾಮಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೆ ಸಮೃದ್ಧವಾದ ಬೆಳೆ ಬೆಳೆಯುತ್ತಿದ್ದ ರೈತರ ಜಮೀನು ಇಂದು ಬಂಜರುಗೊಂಡಿದೆ. ಅಂತರ್ಜಲ ಮಟ್ಟ ಕುಸಿದಿದೆ. ಈ ಹಂತದಲ್ಲಾದರೂ ಭೂಮಿಯ ಉಳಿವಿಗಾಗಿ ಮಣ್ಣು, ನೀರು ಮತ್ತು ಸಸ್ಯ ಸಂರಕ್ಷಣೆ ಕುರಿತ ಅರಿವನ್ನು  ಮೂಡಿಸುವ ಕೆಲಸ ಕ್ಷಿಪ್ರಗತಿಯಲ್ಲಿ ಆಗಬೇಕು. ಅರ್ಕಾವತಿ ನದಿ ಪುನಶ್ಚೇತನಕ್ಕೆ ಪೂರಕವಾದ ಜಲಾನಯನದ ನೀರಿನ ನಿರ್ವಹಣೆ ಕುರಿತಂತೆ ಸಂಶೋಧನೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ತಾಲೂಕಿನ ಅರಳು ಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವಮಾನ್ಯಗೊಲ್ಲಹಳ್ಳಿಯಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರವನ್ನು ಸ್ಥಾಪಿಸಿದೆ. ಮತ್ತೊಂದು ಕೇಂದ್ರಕ್ಕೆ ಹಾಡೋನಹಳ್ಳಿಯಲ್ಲಿ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ವೈಜ್ಞಾನಿಕ ಶೋಧನೆ: ಈ ಹವಾಮಾನ ಕೇಂದ್ರಗಳಿಂದ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಆಗುವ ವ್ಯತ್ಯಾಸಗಳು, ನೀರಿನ ಬರಕ್ಕೆ ಕಾರಣವಾಗುವ ಅಕಾಲಿಕ ಮಳೆ, ಅಂತರ್ಜಲ ಬಳಕೆ ಮತ್ತು ಅರಿವು, ನೀಲಗಿರಿ ಮತ್ತಿತರ ಬೆಳೆಗಳಿಂದಾಗುವ ಬಾಷ್ಪೀಕರಣ ಸೇರಿದಂತೆ ಹಲವು ಅಂಶಗಳ ಕುರಿತ ವೈಜ್ಞಾನಿಕ ಶೋಧನೆ ನಡೆಯುತ್ತಿದೆ ಎಂದರು. ದೇವನಹಳ್ಳಿ ಕ್ಷೇತ್ರದ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಪರಿಸರ ಕಾಳಜಿ ಕೇವಲ ಭಾಷಣಗಳಿಗೆ ಸೀಮಿತವಾಗಿದ್ದು, ಕಾರ್ಯಗತವಾಗುವಲ್ಲಿ ಅರಿವಿನ ಕೊರತೆ ಎದ್ದುಕಾಣುತ್ತಿದೆ. ಭೂಮಿ ಉಳಿದರೆ ಮಾತ್ರ ಎಲ್ಲ ಜೀವಿಗಳು ಉಳಿಯುತ್ತವೆ ಎಂಬ ಸತ್ಯವನ್ನು ಮೊದಲು ಮನುಷ್ಯರು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಹ ಮಾದರಿಯಾಗಲಿದೆ: ಸಾಮಾಜಿಕ ಕಾರ್ಯಕರ್ತ ಜನಾರ್ದನ ಕೆಸರಗದ್ದೆ ಮಾತನಾಡಿ ಮುಂದಿನ ಹತ್ತು-ಹದಿನೈದು ವರ್ಷಗಳ ಕಾಲ ಈ ಭಾಗದ ಜಲ ಸಂಪನ್ಮೂಲ ಸಂರಕ್ಷಣೆಯ ಆಂದೋಲನದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ಮುಖಂಡ ಎಚ್. ಅಪ್ಪಯ್ಯಣ್ಣ, ಅಶೋಕ ಟ್ರಸ್ಟ್‌ನ ಡಾ.ವೀಣಾ ಶ್ರೀನಿವಾಸ್, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ. ಶ್ರೀನಿವಾಸ್, ಮೆಳೇಕೋಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಚಿದಾನಂದ್, ನಾಗರಾಜಗೌಡ, ಅರ್ಕಾವತಿ ಪುನಶ್ಚೇತನದ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಭೂಮ್ತಾಯಿ ಬಳಗ, ಹಳ್ಳಿ ಜನಪದ ಜಾಗತಿಕ ಸಾಂಸ್ಕೃತಿಕ ತಂಡ, ನಾಗದೇನಹಳ್ಳಿ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement