ವರ್ಗ ರಹಿತ ಸಮಾಜ ನಿರ್ಮಾಣವಾಗಲಿ: ಶಂಕರ್
ಆನೇಕಲ್ಲು: ಸಮಾನತೆ, ಸಹೋದರತೆಯಿಂದ ಕೂಡಿದ ಆದರ್ಶಮಯ ದೇಶಕ್ಕಾಗಿ ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕಿದೆ ಎಂದು ಜಿಗಣಿ ಶಂಕರ್ ತಿಳಿಸಿದ್ದಾರೆ.
ಅವರು ಗೋವಿಂದಶೆಟ್ಟಿ ಪಾಳ್ಯದಲ್ಲಿ ಬಸವದಳ ಏರ್ಪಡಿಸಿದ್ದ ಕ್ರಾಂತಿಕಾರಿ ಬಸವಣ್ಣ ಹಾಗೂ
ಡಾ. ಅಂಬೇಡ್ಕರ್ ವಿಚಾರಧಾರೆಗಳ ಸಮೀಕರಣ ವಿಚಾರ ಸಂಕಿರಣದಲ್ಲಿ ಮಾತನಾಡಿ ಶತಮಾನಗಳ ಹಿಂದೆ ವರ್ಣಾಶ್ರಮಧರ್ಮ ಸಂಪ್ರದಾಯ ಪಾಲನೆಯಲ್ಲಿತ್ತು. 12ನೆಯ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿ ಕಹಳೆ ಊದಿ ಸಮಾನತೆಯ ಸಮಾಜಕ್ಕಾಗಿ ಭದ್ರ ಬುನಾದಿ ಹಾಕಿದರು. ಬಾಬಾ ಸಾಹೇಬ್ ಅವರು ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಸಮಾನತೆ, ಮೀಸಲಾತಿ, ಶಿಕ್ಷಣ ಸ್ವಾವಲಂಬನೆಗೆ ಅಡಿಪಾಯ ಹಾಕುವ ಮೂಲಕ ಭಾರತ ದ ಐಕ್ಯತೆಯನ್ನು ಒಗ್ಗೂಡಿಸಿದರು. ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಒಂದೇ ನಾಣ್ಯದ ಎರಡು ಮುಖಗಳಾಗಿ ಅಮೋಘ ಸೇವೆ ಸಲ್ಲಿಸಿದರು ಎಂದರು. ವೈದಿಕ ಧರ್ಮದ ಕಂದಾಚಾರಗಳನ್ನು ಬಸವಣ್ಣ ತ್ಯಜಿಸಿದರೆ ಅಂಬೇಡ್ಕರ್ ಹಿಂದೂ ಧರ್ಮವನ್ನೇ ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.
ಬಸವದಳದ ಸಂಚಾಲಕ ಶ್ರೀ ಶೈಲ ಮಸೂತೆ ಮಾತನಾಡಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಅಕ್ಷರ, ಅರಿವು, ಕಾಯಕವನ್ನು ವಚನ ಸಾಹಿತ್ಯದ ಮೂಲಕ ಪರಿಚಯಿಸಿದರು. ಅಂಬೇಡ್ಕರ್ ಅವರು ಶಿಕ್ಷಣ, ಹೋರಾಟ ಮತ್ತು ಸಂಘಟನೆ ಮೂಲಕ ಹಿಂದುಳಿದ ಮತ್ತು ದಲಿತ ವರ್ಗಗಳ ಪರ ಹೋರಾಟಕ್ಕೆ ಚಾಲನೆ ನೀಡಿದರು. ಇಂತಹ ಮಹಾನ್ ಮಾನವತಾವಾದಿಗಳ ವಿಚಾರಧಾರೆ ಕಾರ್ಯರೂಪಕ್ಕೆ ತರಲು ಸರ್ಕಾರ, ಸಂಘಟನೆಗಳು ವೇದಿಕೆಯನ್ನು ನಿರ್ಮಿಸಬೇಕೆಂದರು. ಅನಿಲ್ ಹೊಸಳ್ಳಿ, ಜೇನುಗೂಡು ಮಹೇಶ್, ಸಂಗಮೇಶ್ ಕಂಬಾರ, ಮರಸೂರು ಅಂಬರೀಶ್ ಮಾತನಾಡಿದರು.