ಹುಣಸನಹಳ್ಳಿ ಗ್ರಾಮದಲ್ಲಿ ಒಣದಿನ ಘೋಷಣೆ
ರಾಮನಗರ: ತಮಿಳುನಾಡು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಏ.24 ರಂದು (ನಾಳೆ) ಮತದಾನ ನಡೆಯಲಿದ್ದು, ಮತದಾನವು ಶಾಂತ ಮತ್ತು ಮುಕ್ತವಾಗಿ ನಡೆಸಲು ರಾಜ್ಯಕ್ಕೆ ಹೊಂದಿಕೊಂಡಿರುವ ಕನಕಪುರ ತಾಲೂಕಿನ ಗಡಿಭಾಗದ ಹುಣಸನಹಳ್ಳಿ ಗ್ರಾಮದಲ್ಲಿ ಮತದಾನದ 48 ಗಂಟೆಗಳ ಪೂರ್ವದಲ್ಲಿ ಅಂದರೆ ಏ.22ರ ಸಂಜೆ 6ರಿಂದ ಏ.24ರ ಸಂಜೆ 6ರವರೆಗೆ ಒಣದಿನ ಘೋಷಿಸಿದೆ.
ಒಣದಿನ ಆಚರಣೆ ಸಂದರ್ಭದಲ್ಲಿ ಗ್ರಾಮದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟನ್ನು, ಸನ್ನದು ಮಳಿಗೆಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ, ಹಂಚಿಕೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ವಂಚಿತ 7 ಮಕ್ಕಳನ್ನು ಶಾಲೆಗೆ ದಾಖಲಿಸಲು ಕ್ರಮ
ರಾಮನಗರ: ಜೀವನೋಪಾಯಕ್ಕಾಗಿ ಗುಜರಾತ್ ರಾಜ್ಯದಿಂದ ವಲಸೆ ಬಂದು ನಗರದ ಅರ್ಚಕರಹಳ್ಳಿ ಮತ್ತು ವಿಜಯನಗರ ಬಡಾವಣೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ ವಾಸಿಸುತ್ತಿರುವ 5 ವರ್ಷ ಮೇಲ್ಪಟ್ಟ ಶಿಕ್ಷಣ ವಂಚಿತ 7 ಮಕ್ಕಳನ್ನು ಶಾಲೆಗೆ ದಾಖಲಿಸಲು ಡಿಡಿಪಿಐ ಪ್ರಹ್ಲಾದಗೌಡ ಕ್ರಮ ಕೈಗೊಂಡಿದ್ದಾರೆ. ಈ ಮಕ್ಕಳಿಗೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕಲಿಕಾ ಚಟುವಟಕೆ ಮಾಡಿಸಲು ರಜಾ ಅವಧಿಯಲ್ಲಿ ಶಿಕ್ಷಕರನ್ನು ನೇಮಿಸಲಾಗಿದೆ. ಜತೆಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದೆ. ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸೀತಾರಾಮ್ ತಿಳಿಸಿದ್ದಾರೆ.
ಲೀಡರ್ಶಿಪ್ ಅವಾರ್ಡ್ ಬೇಸಿಗೆ ಶಿಬಿರ ಮುಕ್ತಾಯ
ರಾಮನಗರ: ಜಿಲ್ಲಾ ರೋಟರಿ ಸಂಸ್ಥೆಯು ಯೂತ್ ಹಾಸ್ಟೆಲ್ ಸಹಯೋಗದೊಂದಿಗೆ ನಗರದ ರಾಮಗಿರಿಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಡ್ವೆಂಚರ್ ರೋಟರಿ ಯೂತ್ ಲೀಡರ್ಶಿಪ್ ಅವಾರ್ಡ್ ಬೇಸಿಗೆ ಶಿಬಿರ ಮುಕ್ತಾಯಗೊಂಡಿದೆ.
ಏ.20 ರಿಂದ 22ರವರೆಗೆ ನಡೆದ ಈ ಶಿಬಿರದಲ್ಲಿ ಸುಮಾರು 50 ಮಕ್ಕಳು ಪಾಲ್ಗೊಂಡಿದ್ದರು. ಈ ವೇಳೆ ಮಕ್ಕಳಿಗೆ ಸಾಹಸ ಕ್ರೀಡೆ ತರಬೇತಿ, ಪ್ರಬಂಧ, ಚಿತ್ರ ಬರೆಯುವುದು, ಚರ್ಚ್ ಸ್ಪರ್ಧೆ, ಸಂಗೀತ, ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾಧ್ಯಕ್ಷ ಆರ್.ಜಿ.ಚಂದ್ರಶೇಖರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳಿಗೆ ಪಾಠ ಪ್ರವಚನದ ಜತೆಗೆ ಮಾನಸಿಕ, ಭೌದ್ಧಿಕ ವಿಕಸನಗೊಳ್ಳುವಂತಹ
ತರಬೇತಿ ಅತ್ಯವಶ್ಯವಾಗಿದೆ. ಈ ಸದುದ್ದೇಶದಿಂದ ರೋಟರಿ ಸಂಸ್ಥೆಯು ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ತರಬೇತಿ ನೀಡಲಾಯಿತು ಎಂದು ತಿಳಿಸಿದರು. ರೋಟರಿ ಕಾರ್ಯದರ್ಶಿ ಎಚ್.ಪಿ. ಮಹಾಲಿಂಗಯ್ಯ, ಯುವಜನ ಸೇವಾ ನಿರ್ದೇಶಕ ರಾಮಕೃಷ್ಣಯ್ಯ, ರೋಟರಿ ಮಾಜಿ ಅಧ್ಯಕ್ಷರಾದ ಕೆ.ಎಸ್.ರಾಮಗೋಪಾಲ್, ಕೆ.ಎಸ್. ಕೃಷ್ಣ, ಆರ್.ವಿ. ಸುರೇಶ್ ಮತ್ತಿತರರು ಭಾಗವಹಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು.
ಲೋಕಾಯುಕ್ತ ಡಿವೈಎಸ್ಪಿ ದೂರು ಸ್ವೀಕಾರ
ರಾಮನಗರ: ರಾಮನಗರ ವಿಭಾಗದ ಲೋಕಾಯುಕ್ತ ಡಿವೈಎಸ್ಪಿ ಏ.28ರಂದು ಮಾಗಡಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ಹಾಗೂ ಏ.29 ರಂದು ಕನಕಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು.
ಮಾಗಡಿ ಹಾಗೂ ಕನಕಪುರ ತಾಲೂಕಿನ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಹಣ ಕೇಳಿದ್ದಲ್ಲಿ ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಲ್ಲಿ ಅಂತಹ ದೂರುಗಳನ್ನು ಖುದ್ದಾಗಿ ಸಲ್ಲಿಸಬಹುದು.