ಅಕ್ರಮ ಫಿಲ್ಟರ್ ಮರಳು ತಯಾರಿಕೆ ಅಡ್ಡೆ ಮೇಲೆ ದಾಳಿ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯಲ್ಲಿ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ದಾಳಿ ನಡೆಸಿದ ನಂತರ ಅಲ್ಲಿ ಸಿಕ್ಕಿ ಸಾಮಗ್ರಿಗಳನ್ನು ಬೆಂಕಿ ಹಚ್ಚಿ ನಾಶ ಮಾಡುವ ವೇಳೆ ಡಿಸೇಲ್ ಕ್ಯಾನ್ ಸಿಡಿದು ಉಪ ತಹಸೀಲ್ದಾರ್ ಹಾಗೂ ಗ್ರಾಮಸಹಾಯಕರೊಬ್ಬರು ಗಂಭೀರವಾಗಿ ಗಾಯಗೊಂಡು ಘಟನೆ ಗುರುವಾರ ನಡೆದಿದೆ.
ಘಟನೆಯಲ್ಲಿ ಜಡಿಗೇನಹಳ್ಳಿ ಉಪತಹಸೀಲ್ದಾರ್ ಕೃಷ್ಣಪ್ಪ ಅವರೆ ಎರಡು ಕಾಲುಗಳಿಗೆ ಹಾಗೂ ಗ್ರಾಮಸಹಾಯಕ ಗಂಗಾಧರ್ ಅವರಿಗೆ ಶೇ.60ರಷ್ಟು ಸುಟ್ಟಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೇಗಾಯ್ತು: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಬೈಲು ನರಸಾಪುರ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಪಿಲ್ಟರ್ ಮರಳು ತಯಾರಿಕೆ ಕೇಂದ್ರಗಳ ಮೇಲೆ ಗುರುವಾರ ಸೂಲಿಬೆಲೆ, ಜಡಿಗೇನಹಳ್ಳಿ, ನಂದಗುಡಿ ಹೋಬಳಿಯ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ದಾಳಿ ನಡೆಸಿದರು. ದಾಳಿಯ ಸುಳಿವು ಅರಿತ ದಂಧೆಕೋರರು ಫಿಲ್ಟರ್ ಮರಳು ಅಡ್ಡೆಗಳ ಬಳಿಯೇ ತಯಾರಿಕೆ ಬಳಿಸುತ್ತಿದ್ದ ಸಾಮಗ್ರಿಗಳು ಹಾಗೂ ಲಾರಿಗಳನ್ನು ಬಿಟ್ಟು ಪರಾರಿಯಾಗಿದರು. ಮಾರಸಂಡಹಳ್ಳಿ ಬಳಿ ಮರಳು ಶೋಧಿಸಲು ಬಳಿಸುವ ವಸ್ತುಗಳ ಜೊತೆಗೆ ಮರಳನ್ನು ಭೂಮಿಯಿಂದ ಮೇಲೆತ್ತಲು ಬಳಿಸುವ ಮೋಟಾರ್ ಯಂತ್ರ, ಅದಕ್ಕೆ ಹಾಕುವ ಡೀಸೆಲ್ ಕ್ಯಾನ್ಗಳು ಪತ್ತೆಯಾದವು. ಇವುಗಳನ್ನು ಅಲ್ಲೇ ನಾಶ ಮಾಡಲು ಅಧಿಕಾರಿಗಳು ಹಚ್ಚಿದ ಬೆಂಕಿಯ ವೇಳೆ ಡೀಸೆಲ್ ಕ್ಯಾನ್ಗಳು ಸಿಡಿದು ಅಲ್ಲೇ ನಿಂತಿದ್ದ ಜಡಿಗೇನಹಳ್ಳಿ ಹೋಬಳಿ ನಾಡಕಚೇರಿಯ ಉಪ ತಹಸೀಲ್ದಾರ್ ಕೃಷ್ಣಪ್ಪ ಎವರ ಎರಡು ಕಾಲುಗಳಿಗೆ ಹಾಗೂ ನಂದಗುಡಿ ಹೋಬಳಿಯ ಗ್ರಾಮ ಸಹಾಯಕ ಡಿ.ಶೆಟ್ಟಹಳ್ಳಿ ನಿವಾಸಿ ಗಂಗಾಧರ್ (23) ಬೆಂಕಿ ತಗುಲಿತು. ತಕ್ಷಣ ಅಲ್ಲಿದ್ದವರು ಬೆಂಕಿಯನ್ನು ನಂದಿಸಿ ಕೃಷ್ಣಪ್ಪ ಅವರನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ಹಾಗೂ ಶೇ.60 ರಷ್ಟು ಸುಟ್ಟಗಾಯವಾಗಿದೆ ಎನ್ನಲಾಗಿರುವ ಗಂಗಾಧರ ಅವರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ದಾಖಲಿಸಿದ್ದಾರೆ. ಘಟನೆಯ ವಿಷಯ ತಿಳಿದ ತಹಸೀಲ್ದಾರ್ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಧಾವಿಸಿ ಗಾಯಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯ ಯೋಗ ಕ್ಷೇಮಾ ವಿಚಾರಣೆ ಮಾಡಿದರು. ಘಟನೆಯ ನಂತರ ನಾಲ್ಕು ಲಾರಿಗಳನ್ನು ನಂದಗುಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.