ವಿವಾಹ ಪೂರ್ವ ಲೈಂಗಿಕ ಸಂಪರ್ಕ ಬೇಡ
ರಾಮನಗರ: ವಿವಾಹ ಪೂರ್ವ ಲೈಂಗಿಕ ಸಂಪರ್ಕ ಇಟ್ಟುಕೊಳ್ಳದೆ ವಿವಾಹದ ನಂತರ ಏಕಪತ್ನಿ, ಏಕಪತಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರೆ ದೇಶದಲ್ಲಿ ಎಚ್ಐವಿ ಸೋಂಕಿತರ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸಾಧ್ಯ ಎಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಹರೀಶ್ ತಿಳಿಸಿದರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಪದವಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಆಯೋಜಿಸಿದ್ದ ಭಾರತದಲ್ಲಿ ಎಚ್ಐವಿ ಸೋಂಕು ನಿಯಂತ್ರಿಸಿ, ಶೂನ್ಯ ಪ್ರಮಾಣಕ್ಕೆ ಇಳಿಸೋಣ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ದೇಶದ ಎಚ್ಐವಿ ಸೋಂಕಿತರಲ್ಲಿ ಶೇ.45ರಷ್ಟು ಮಂದಿ 15 ರಿಂದ 45ರ ವರ್ಷದೊಳಗಿನವರು ಎಂದು ಆತಂಕ ವ್ಯಕ್ತಪಡಿಸಿದರು.
ಹೆಚ್ಚಾಗಿ ಯುವಜನರು ಎಚ್ಐವಿ ಸೋಂಕಿತರಾಗಲು ಅಪರಿಚಿತರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಹಲವು ಮಾದಕ ವ್ಯಸನಿಗಳು ಒಂದೇ ಸೂಜಿಯಿಂದ ಚುಚ್ಚಿಕೊಳ್ಳುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಪರೀಕ್ಷೆಗೊಳಪಡಿಸದೆ ರಕ್ತ ಪಡೆಯುವುದೇ ಕಾರಣವಾಗಿದೆ ಎಂದು ಹೇಳಿದರು.
ನಿತ್ಯ ಜೀವನ ಕ್ರಮದಲ್ಲಿ ಕೆಲವು ಎಚ್ಚರಿಕೆಗಳನ್ನು ಪಾಲಿಸಿದರೆ ಮಾರಕ್ ಏಡ್ಸ್ ರೋಗ ಬರದಂತೆ ತಡೆಗಟ್ಟಬಹುದು. ಸೋಂಕಿತ ವ್ಯಕ್ತಿಯ ಜೊತೆ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದಿರುವುದು, ರಕ್ತಪಡೆಯವ ಸಂದರ್ಭದಲ್ಲಿ ಪರೀಕ್ಷಿಸಿದ ರಕ್ತ ಪಡೆಯಬೇಕು ಎಂದರು.
ಸಲಹೆ: ಚುಚ್ಚುಮದ್ದು ಪಡೆಯುವ ವೇಳೆ ಹೊಸ ಸಿರಂಜ್ ಬಳಸಬೇಕು, ಕ್ಷೌರ ಮಾಡಿಸುವಾಗ ಹೊಸ ಬ್ಲೇಡ್ ಬಳಸಬೇಕು, ಸೋಂಕಿತ ತಾಯಿ ಗರ್ಭಿಣಿಯಾದ ಮೂರು ತಿಂಗಳಿನಿಂದ ಸೂಕ್ತ ಚಿಕಿತ್ಸೆ ಪಡೆದರೆ ಮಗುವಿಗೆ ರೋಗ ಹರಡದಂತೆ ತಡೆಗಟ್ಟಬಹುದು ಎಂದು ಹರೀಶ್ ಸಲಹೆ ನೀಡಿದರು.
ಎಚ್ಐವಿ ಸೊಂಕು ಪುರುಷರಿಂದ ಸ್ತ್ರಿಯರಿಗೆ ಹರಡುವುದು ಹೆಚ್ಚು. ಪುರುಷರು ದುಶ್ಚಟಗಳಿಗೆ ದಾಸರಾಗಬಾರದು. ಯುಜನರು ಎಚ್ಐವಿ ಹರಡುವ ಬಗ್ಗೆ ಮಾಹಿತಿ ಪಡೆದು, ಕೆಲವು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದರೆ ಭಾರತವನ್ನು ಏಡ್ಸ್ ಮುಕ್ತ ದೇಶ ಮಾಡಲು ಸಾಧ್ಯ ಎಂದು ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮಾಧಿಕಾರಿ ಜಿ.ಶಿವಣ್ಣ ವಿವರಿಸಿದರು.
ಹೆದರಿಲ್ಲ: ಹಿರಿಯರ ಬುದ್ಧಿ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸ್ವೇಚ್ಛಾಚಾರದಿಂದ ನಡೆದುಕೊಂಡಿದ್ದಕ್ಕೆ ಎಚ್ಐವಿ ಸೋಂಕು ತಗುಲಿತು. ನಿರಾಸೆಯಿಂದ ಹೆದರಿ ಆತ್ಮಹತ್ಯೆಗೆ ಒಳಗಾಗದೆ ಎಚ್ಐವಿಯನ್ನು ಮೆಟ್ಟಿನಿಲ್ಲುವ ಧೈರ್ಯದಿಂದ ಜೀವಿಸುತ್ತಿದ್ದೇನೆ. ಸೋಂಕಿಗೊಳಗಾಗದಂತೆ ಯುವಜನರಿಗೆ ಎಚ್ಚರಿಕೆ, ಮಾರ್ಗದರ್ಶನ ನೀಡುತ್ತಾ ಬದುಕಿದ್ದೇನೆ ಎಂದು ಎಚ್ಐವಿ ಸೋಂಕಿಗೊಳಗಾಗಿರುವ ಶಾಂತರಾಜ್ ಹೇಳಿದರು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಚ್ಐವಿ ಸೋಂಕು ಕಂಡು ಹಿಡಿಯಲು ಉಚಿತವಾಗಿ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಸೋಂಕು ಇರುವುದು ಖಚಿತವಾದರೆ ಅವರ ಹೆಸರನ್ನು ಗೌಪ್ಯವಾಗಿರಿಸಿ, ಆಪ್ತ ಸಮಾಲೋಚನೆ ನಡೆಸಲಾಗುತ್ತದೆ. ಸರ್ಕಾರವೇ ಉಚಿತ ಔಷಧಿ ಹಾಗೂ ಸಾರಿಗೆ ವೆಚ್ಚವನ್ನು ನೀಡುತ್ತಿದೆ ಎಂದರು.
ಎಚ್ಐವಿ ಸೋಂಕಿತರನ್ನು ಅವಮಾನಿಸದೆ ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಚ್ಐವಿಗೆ ಒಳಗಾದವರು 20ಕ್ಕೂ ಅಧಿಕ ವರ್ಷ ಬದುಕಿರುವವರೂ ಇದ್ದಾರೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪ್ರಾಂಶುಪಾಲ ಭೈರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ವೇತಾ, ಬಿಂದುಶ್ರೀ, ಸರಸ್ವತಿ, ತ್ರಿವೇಣಿ, ಶಾಂತರಾಜ್, ಲೋಕೇಶ್, ವಿಜಯ್ಕುಮಾರ್, ರುದ್ರಸ್ವಾಮಿ, ಜಿ.ಕೃಷ್ಣನಾಯಕ್ ಮತ್ತಿತರರು ಭಾಗವಹಿಸಿದ್ದರು.