ಪಕ್ಷಿಗಳ ಅಕ್ರಮ ಸಾಗಣೆ: ಇಬ್ಬರ ಸೆರೆ
ಸೂಲಿಬೆಲೆ: ಖಚಿತ ವರ್ತಮಾನದ ಮೇರೆಗೆ ಹೊಸಕೋಟೆ ವಲಯ ಅರಣ್ಯಾಧಿಕಾರಿ ಹರ್ಷವರ್ಧನ್ ನೇತೃತ್ವದ ತಂಡ ಹೊಸಕೋಟೆ ದೊಡ್ಡಕೆರೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಹೆರಾನ್ ಜಾತಿಯ ಪಕ್ಷಿಗಳನ್ನು ರಕ್ಷಣೆ ಮಾಡಿದ್ದು, ಇವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆಂಧ್ರಪ್ರದೇಶದ ಕದ್ರಿ ಮೂಲದ ರಾಮಾಂಜಿನಿ(31) ಹಾಗೂ ನಾಗಣ್ಣ(32) ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹೊಸಕೋಟೆ ದೊಡ್ಡಕೆರೆಯಲ್ಲಿ ದುಷ್ಕರ್ಮಿಗಳು ಅಕ್ರಮವಾಗಿ ಪಕ್ಷಿಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ವಲಯ ಅರಣ್ಯಾಧಿಕಾರಿಗಳ ಕೈಗೆ ಇಬ್ಬರು ಸಿಕ್ಕಿ ಬಿದ್ದರು.ಅವರ ಬಳಿ ಹೆರಾನ್ ಜಾತಿಯ ಎರಡು ಪಕ್ಷಿಗಳಿದ್ದು, ಅವುಗಳನ್ನು ವಶಕ್ಕೆ ಪಡೆದು ಸೂಕ್ತ ಚಿಕಿತ್ಸೆ ಕೊಡಿಸಲಾಯಿತು. ಪಕ್ಷಿಗಳ ಸಾಗಟ ಮಾತ್ರವಲ್ಲದೆ ಮೂರು ಕೊಕ್ಕೆರೆಗಳನ್ನು ಸಾಯಿಸಿದ್ದರು. ತಕ್ಷಣ ಪಕ್ಷಿ ಹಾಗೂ ಬಂಧಿತರನ್ನು ವಶಕ್ಕೆ ಪಡೆದ ವಲಯಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ನ್ಯಾಯಾಲಯದ ಆದೇಶದಂತೆ ಪಕ್ಷಿಗಳನ್ನು ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.