ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಲಕನ ಶಸ್ತ್ರಚಿಕಿತ್ಸೆಗೆ ನೆರವು ನೀಡುವಿರಾ...

Mainashree
Updated On : 26 Apr 2014, 12:16 pm

ರಾಮನಗರ: ದರಿದ್ರಲಕ್ಷ್ಮಿ ಕಾಲೂರಿರುವ ಆ ಮನೆಯಲ್ಲಿ ಏಕೈಕ ಕರುಳಕುಡಿಗೆ ವಿಚಿತ್ರ ಕಾಯಿಲೆಯ ಬಾಧೆ. ಒಂದಲ್ಲಾ ಎರಡಲ್ಲಾ ಎಂಟು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿದ್ದರೂ ಆತ ಗುಣಮುಖನಾಗಲೇ ಇಲ್ಲ. ಈಗ ಇನ್ನೊಂದು ಬಾರಿ
ಶಸ್ತ್ರಚಿಕಿತ್ಸೆ ತುರ್ತಾಗಿ ಆಗಬೇಕೆನ್ನುವ ವೈದ್ಯರ ಮಾತು ಕೇಳಿ ಹೆತ್ತವರು ಕಂಗಾಲು.  ಇದು ಬಡತನದ ಬೇಗೆಯಲ್ಲಿ ಬೆಂದು ಬಸವಳಿದ ಕುಟುಂಬದ ಕರುಣಾಜನಕ ಕತೆ.
ಮಗನ ಕಾಯಿಲೆಗೆ ಇದ್ದ ಎಲ್ಲವನ್ನೂ ಖರ್ಚು ಮಾಡಿರುವ ಪೋಷಕರು ಈಗ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಲು ಹಣ ಹೊಂದಿಸುವುದಾದರೂ ಹೇಗೆ? ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ.  
ಇಂತಹ ಸಂಕಷ್ಟದ ಸ್ಥಿತಿಯಲ್ಲಿರುವವರು ರಾಮನಗರದ ಐಜೂರು ಬಡಾವಣೆಯಲ್ಲಿ ಕೂಲಿ ನಾಲಿ ಮಾಡಿಕೊಂಡು ಬದುಕಿನ ಬಂಡಿ ನಡೆಸುತ್ತಿರುವ ಸೋಮಸುಂದರ್-ಶಾರದ ದಂಪತಿ. ಅವರಿಗೆ ಸಾವು-ಬದುಕಿನ ನಡುವೆ ಕಾಲ ದೂಡುತ್ತಿರುವ ಏಕಮಾತ್ರ ಪುತ್ರ ಆನಂದಕುಮಾರನದ್ದೇ ಚಿಂತೆ.
ಹತ್ತನೇ ತರಗತಿಯಲ್ಲಿ ಓದುತ್ತಿರುವ ಆನಂದಕುಮಾರನಿಗೆ ಬಾಲ್ಯದಿಂದಲೇ ತಲೆಬೇನೆ ಕಾಣಿಸಿಕೊಳ್ಳಲಾರಂಭಿಸಿತು. ತಲೆಯಲ್ಲಿ ಗೆಡ್ಡೆಯಿದೆ, ನೀರು ತುಂಬಿದೆ ಎಂದು ಎಂಟು ಬಾರಿ ಆತನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮೇಲಿಂದ ಮೇಲೆ ಶಸ್ತ್ರಚಿಕಿತ್ಸೆ ಪರಿಣಾಮ, ತಲೆ ಸ್ವರೂಪವೇ ಬದಲಾಗಿದೆ. ಇದೀಗ ತಲೆಯಲ್ಲಿ ಗೆಡ್ಡೆ ಬೆಳೆದಿದ್ದು, ಪರಿಸ್ಥಿತಿ ಕೈಮೀರುತ್ತಿದೆ.
ವಾರದೊಳಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಪ್ರಾಣಾಪಾಯವಿದೆ ಎಂದು ನಾರಾಯಣ ಹೃದಯಾಲಯ ವೈದ್ಯರು ಹೇಳಿದ್ದಾರೆ.
ಹೆತ್ತೊಬ್ಬ ಮಗನನ್ನು ಉಳಿಸಿಕೊಳ್ಳಲು ತಮ್ಮೆಲ್ಲಾ ಸಂಪಾದನೆ ಕಳೆದುಕೊಂಡು, ಸಾಲ-ಸೋಲ ಮಾಡಿರುವ ಪೋಷಕರು ಇದೀಗ ಶಸ್ತ್ರಚಿಕಿತ್ಸೆಗೆ ರು.2 ಲಕ್ಷ ಹೊಂದಿಸಲು ಪಡುತ್ತಿರುವ ಸಂಕಷ್ಟ ಹೇಳತೀರದಾಗಿದೆ. ದಾನಿಗಳು ನೆರವಾಗುವರೇ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.
 ಸಹಾಯ ಮಾಡುವ ದಾನಿಗಳು ಕರ್ಣಾಟಕ ಬ್ಯಾಂಕ್‌ನ ರಾಮನಗರ ಶಾಖೆಯಲ್ಲಿರುವ ಆನಂದಕುಮಾರನ ಅಕೌಂಟ್ ನಂ.652200103140701 ಇಲ್ಲಿಗೆ ಜಮೆ ಮಾಡಬಹುದು. ವಿವರಕ್ಕೆ ಮೊ. 97439-62584, 99450-26432 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement