ಸಿಸಿಬಿ ಸೋಗಿನಲ್ಲಿ 30 ಲಕ್ಷ ದರೋಡೆ
ರಾಮನಗರ: ಪೊಲೀಸರ ಸೋಗಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಬಸ್ ಅಡ್ಡಗಟ್ಟಿದ ದುಷ್ಕರ್ಮಿಗಳು ಇಬ್ಬರು ಪ್ರಯಾಣಿಕರನ್ನು ಅಪಹರಿಸಿ, ಅವರ ಬಳಿಯಿದ್ದ ರು.30 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ನಗರದ ಹೊರವಲಯದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಬೆಂಗಳೂರಿನ ಅಂಚೆಪಾಳ್ಯದ ಸಾದಿಕ್ ಮತ್ತು ಅಲೀಂ ಪಾಷಾ ಹಣ ಕಳೆದುಕೊಂಡವರು. ಬೆಂಗಳೂರಿನ ಜ್ಯೂವೆಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರೂ ಮಾಲೀಕ ಅಬ್ಬಾಸ್ ಎಂಬುವರ ಬಳಿ ಹಣ ಪಡೆದು, ಚಿನ್ನ ಖರೀದಿಸಲು ಬಸ್ನಲ್ಲಿ ಕೇರಳದ ಕ್ಯಾಲಿಕಟ್ಗೆ ಪ್ರಯಾಣಿಸುತ್ತಿದ್ದರು.
ಸಾದಿಕ್ ಮತ್ತು ಅಲೀಂ ಪಾಷ ಅವರನ್ನು ಸ್ವತಃ ಮಾಲೀಕ ಅಬ್ಬಾಸ್ ಹಣ ಕೊಟ್ಟು, ಬಸ್ ಹತ್ತಿಸಿದ್ದರು. ಬಸ್ ಕೆಂಗೇರಿ, ಬಿಡದಿ ಮಾರ್ಗವಾಗಿ ರಾಮನಗರದ ಹೊರ ವಲಯದಲ್ಲಿರುವ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಬಳಿ ಬರುತ್ತಿದ್ದಂತೆಯೇ ರಾತ್ರಿ 12ರಲ್ಲಿ ಮಾರುತಿ ಎರ್ಟಿಗೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿದರು.
ಕಾರಿನಲ್ಲಿ ಚಾಲಕ ಸಹಿತ 4 ಮಂದಿ ಇದ್ದರೆಂದು ಹೇಳಲಾಗಿದೆ. ಕಾರಿನಿಂದ ಇಳಿದ ಮೂವರು ತಮ್ಮನ್ನು ಬೆಂಗಳೂರಿನ ಸಿಸಿಬಿ ಪೊಲೀಸರೆಂದು ಪರಿಚಯಿಸಿಕೊಂಡು, ಸಾದಿಕ್ ಮತ್ತು ಅಲೀಂ ಪಾಷ ಇಬ್ಬರನ್ನೂ ಹಣದ ಸಮೇತ ಬಸ್ನಿಂದ ಕೆಳಗಿಳಿಸಿ ಕಾರು ಹತ್ತಿಸಿಕೊಂಡರು.
ಬೆಂಗಳೂರು ಕಡೆ ಕಾರು ಚಾಲನೆ ಮಾಡಿಕೊಂಡು ಹೊರಟ ದುಷ್ಕರ್ಮಿಗಳು ಕೆಂಗೇರಿ ಮೇಲ್ಸೇತುವೆ ಬಳಿ ಸಾದಿಕ್ ಮತ್ತು ಅಲೀಂ ಪಾಷ ಅವರನ್ನು ಥಳಿಸಿ, ಕಾರಿನಿಂದ ಆಚೆಗೆ ದೂಡಿದರು. ನಂತರ ಹಣದೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಇಬ್ಬರೂ ಮಾಲೀಕ ಅಬ್ಬಾಸ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ಅಬ್ಬಾಸ್ ಸೂಚನೆ ಮೇರೆಗೆ ಸಾದಿಕ್ ಮತ್ತು ಅಲೀಂ ಪಾಷ ಅವರಿಬ್ಬರೂ ರಾಮನಗರ ಪುರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಷ್ಟರಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕ ಕೂಡ ನಡೆದ ಘಟನೆ ವಿವರವನ್ನು ಪೊಲೀಸರಿಗೆ ಮುಟ್ಟಿಸಿ, ಹೋಗಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಮತ್ತು ಡಿವೈಎಸ್ಪಿ ರಾಮಲಿಂಗಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರುದಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.