ಹರಟೆ ಸಿಬ್ಬಂದಿಗೆ ಮನೆ ಹಾದಿ ಖಚಿತ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇನ್ನು ಹಾಳು ಹರಟೆ ಹೊಡೆದುಕೊಂಡಿರುವರಿಗೆ ಜಾಗವಿಲ್ಲ!
ಕೆಲಸ ಮಾಡದೆ ತಿಂಗಳಾಂತ್ಯಕ್ಕೆ ಸಂಬಳ ಲೆಕ್ಕ ಮಾಡುವ ಸಿಬ್ಬಂದಿಗಳ ಮೇಲೆ ಕೆಂಗಣ್ಣು ಬೀರಿರುವ ಕುಲಪತಿ ಪ್ರೊ. ತಿಮ್ಮೇಗೌಡ, ಸಿಬ್ಬಂದಿಗಳ ಮೌಲ್ಯಮಾಪನಕ್ಕೆ ನೂತನ ಸಮಿತಿ ರಚಿಸಲು ಮುಂದಾಗಿದ್ದಾರೆ. ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಸಮಿತಿ ರಚಿಸಲು ಕುಲಪತಿ ಅನುಮತಿ ಪಡೆದಿದ್ದಾರೆ. ಪ್ರತಿ ವರ್ಷವು ಸಿಬ್ಬಂದಿಗಳ ಮೌಲ್ಯಮಾಪನ ಮಾಡಲಿರುವ ಈ ಸಮಿತಿ, ಕೆಲಸ ಮಾಡದವರಿಗೆ ಗೇಟ್ಪಾಸ್ ನೀಡಲಿದೆ ಎಂದು ತಿಮ್ಮೇಗೌಡ ತಿಳಿಸಿದ್ದಾರೆ.
ಈ ಹಿಂದೆಯೂ ಬೆಂಗಳೂರು ವಿವಿಯಲ್ಲಿ ಇಂತಹದೊಂದು ವ್ಯವಸ್ಥೆ ಜಾರಿಯಲ್ಲಿತ್ತು. ವಿಶ್ರಾಂತ ಕುಲಪತಿಗಳ ಅಧ್ಯಕ್ಷತೆಯ ಸಮಿತಿಯು ಸಿಬಛಂದಿಗಳ ಮೌಲ್ಯಮಾಪನ ಮಾಡುತ್ತಿತ್ತು. ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಬಾರದವರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಈ ವ್ಯವಸ್ಥೆ ಜಾರಿ ಮಾಡುವ ಅಗತ್ಯವಿದೆ. ಇಂತಹ ಕೆಲ ಸಿಬ್ಬಂದಿಗಳಿಂದ ವಿವಿಯ ಹೆಸರು ಕೆಡುತ್ತಿದೆ ಎಂದು ಕುಲಪತಿ ಹೇಳಿದ್ದಾರೆ.
'ಕಚೇರಿಗೆ ಕುಡಿದುಕೊಂಡು ಬರುವವರಿದ್ದಾರೆ. ಕೆಲಸದ ಸಮಯಕ್ಕೆ ವಿವಿಗೆ ಬಾರದೇ ತಲೆ ಹರಟೆ ಕೆಲಸ ಮಾಡುವವರಿದ್ದಾರೆ. ಇಂತಹ ಕೆಲಸಕ್ಕೆ ಬಾರದ ಜನರನ್ನು ನಿಯಂತ್ರಿಸುವ ಅಗತ್ಯವಿದೆ. ಇವರ ಬಗ್ಗೆ ಕನಿಕರ ತೋರುವ ಅಗತ್ಯವಿಲ್ಲ' ಎಂದು ಸ್ಪಷ್ಟ ಸಂದೇಶ ನೀಡಿರುವ ಪ್ರೊ. ತಿಮ್ಮೇಗೌಡ, ಶೀಘ್ರದಲ್ಲಿಯೇ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಿತಿಯಲ್ಲಿ ವಿಶ್ರಾಂತ ಕುಲಪತಿಯನ್ನೇ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇಲ್ಲವಾದಲ್ಲಿ ಸಿಂಡಿಕೇಟ್ ಸದಸ್ಯರು ಹಾಗೂ ಶಿಕ್ಷಣ ತಜ್ಞರನ್ನೊಳಗೊಂಡ 3 ಅಥವಾ 5 ಜನರ ಸಮಿತಿ ಮೌಲ್ಯಮಾಪನ ಮಾಡುತ್ತದೆ. ವರ್ಷಕ್ಕೊಮ್ಮೆ ಸಮಿತಿಯು ಮಾಪನ ಮಾಡಲಿದೆ. ಸಿಬ್ಬಂದಿಗಳ ಕಾರ್ಯಕ್ಷಮತೆ, ಹಾಜರಿ, ಗುಣಮಟ್ಟ ಹಾಗೂ ದೂರುಗಳನ್ನು ಇದು ಗಮನಿಸುತ್ತದೆ. ಇದರ ಜತೆಗೆ ಪ್ರತಿ ಸೆಮಿಸ್ಟರ್ ಕೊನೆಯಲ್ಲಿ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳು ನೀಡುವ ಅಭಿಪ್ರಾಯ ವರದಿಯನ್ನು ಈ ಸಮಿತಿ ಗಮನಿಸಲಿದೆ ಎಂದು ತಿಮ್ಮೇಗೌಡ ವಿವರಿಸಿದರು.
ಪರೀಕ್ಷಾ ಅಕ್ರಮ ತಡೆಗೆ ಗ್ರೇಸಿಂಗ್ ಪದ್ಧತಿ: ಅಂಕಪಟ್ಟಿ ತಿದ್ದುಪಡಿ ಹಾಗೂ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸಿಂಗ್ ಪದ್ಧತಿ ಜಾರಿ ಮಾಡಲು ಕುಲಪತಿ ಚಿಂತನೆ ನಡೆಸಿದ್ದಾರೆ.
ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗರಿಷ್ಠ 6 ಗ್ರೇಸ್ ಅಂಕ ನೀಡಲು ಚಿಂತಿಸಲಾಗಿದೆ. ಒಂದು ವಿಷಯಕ್ಕೆ ಗರಿಷ್ಠ 2 ಹಾಗೂ ಒಟ್ಟು 6 ಅಂಕದವರೆಗೆ ಗ್ರೇಸ್ ನೀಡಬಹುದಾಗಿದೆ. ಇದರಿಂದ ಒಂದೆರಡು ಅಂಕದಲ್ಲಿ ಅನುತ್ತೀರ್ಣರಾಗವವರಿಗೆ ನೆರವಾಗುತ್ತದೆ. ಒಂದು ಅಂಕಕ್ಕಾಗಿ ಅಕ್ರಮ ಮಾಡುವವರ ಸಂಖ್ಯೆ ನಿಯಂತ್ರಣವಾಗುತ್ತದೆ ಎಂದು ತಿಮ್ಮೇಗೌಡ ಹೇಳಿದ್ದಾರೆ.
ಗ್ರೇಸಿಂಗ್ ಪದ್ಧತಿಯನ್ನು ವಿದ್ಯಾವಿಷಯಕ ಹಾಗೂ ಸಿಂಡಿಕೇಟ್ ಸಭೆಯೆದುರು ತಂದು ಅನುಮತಿ ಪಡೆಯಲಾಗುವುದು. ಆ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಪರೀಕ್ಷಾ ಅಕ್ರಮವನ್ನು ನಿಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಗ್ರೇಸಿಂಗ್ ವ್ಯವಸ್ಥೆ ಒಂದೆರಡು ಅಂಕದಲ್ಲಿ ಕಡಿಮೆ ಶ್ರೇಣಿ ಹೊಂದಿದ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ. ಗ್ರೇಸ್ ಅಂಕಕ್ಕಾಗಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಬದಲಾಗಿ ಫಲಿತಾಂಶ ನೀಡುವಾಗ ಇದನ್ನು ಪರಿಗಣಿಸಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.