ವಿದ್ಯಾವಂತ ತರುಣರಿಂದ ದೇಶೀಯ ಸಂಸ್ಕೃತಿ ಉನ್ನತಿ ಸಾಧ್ಯ
ಆನೇಕಲ್ಲು: ದೇಶದಲ್ಲಿನ ವಿದ್ಯಾವಂತ ತರುಣರು ದೇಶೀಯ ಸಂಸ್ಕೃತಿಯನ್ನು ಮರೆತು ತಮಗೆ ಅರಿವಿಲ್ಲದಂತೆ ವಿದೇಶಿ ಸಂಸ್ಕಾರದ ಅಮಲಿಗೆ ಜಾರುತ್ತಿರುವುದು ವಿಷಾದನೀಯ ಎಂದು ಗುಜರಾತಿನ ನಾರಾಯಣ ಗುರುಕುಲದ ಸಾಧು ಹರಿಪ್ರಸಾದ ದಾಸಜಿ ತಿಳಿಸಿದ್ದಾರೆ. ಅವರು ತಾಲೂಕಿನ ಪ್ರಶಾಂತಿ ಕುಟೀರದ ಯೋಗ ಅನುಸಂಧಾನ ಸಂಸ್ಥಾನದ ಆವರಣದಲ್ಲಿ ಯೋಗ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ವಿವಿಗಳಿಂದ ಪದವಿ ಪಡೆಯುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವೀಯ ಮೌಲ್ಯಗಳು, ಹಕ್ಕುಗಳ ಬಗ್ಗೆಯೂ ಅಧ್ಯಯನ ಮಾಡಬೇಕಿದೆ. ಸನಾತನ ಭಾರತೀಯ ಸಂಸ್ಕೃತಿಯು ಮನುಕುಲದ ಉಳಿವಿಗಾಗಿ ವಿಶ್ವ ಭ್ರಾತೃತ್ವ ಸಂಸ್ಕಾರವನ್ನು ಪರಿಚಯಿಸುತ್ತಿದ್ದು ವಿದ್ಯಾವಂತ ತರುಣರು ದೇಶ ವಿದೇಶಗಳಲ್ಲಿ ಪಸರಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾವಂತ ತರುಣ ತರುಣಿಯರಿಂದ ಮಾತ್ರ ದೇಶೀಯ ಸಂಸ್ಕೃತಿಯ ಉಳಿವು, ಉನ್ನತಿ ಸಾಧ್ಯ ಎಂದರು. ಶುದ್ಧ ಹಸ್ತ, ಶುದ್ಧ ಆಲೋಚನೆ ಮತ್ತು ಸ್ವಚ್ಛ ಆಡಳಿತ ಮುಂದಿನ ಗುರಿಯಾಗಿದ್ದು ಭ್ರಷ್ಟಾಚಾರ ಮುಕ್ತ ಹಾಗೂ ಸ್ವಜನ ಪಕ್ಷಪಾತ ರಹಿತ ಪ್ರಾಮಾಣಿಕ ಸಮಾಜವನ್ನು ಮತ್ತೆ ಕಟ್ಟಬೇಕಿದೆ. ತಮ್ಮ ಉದ್ಯೋಗದ ಜೊತೆಗೆ ದೇಶದ ಆರ್ಥಿಕ ಬೆನ್ನೆಲುಬನ್ನು ಬಲಪಡಿಸುವ ಬಗ್ಗೆ ಎಲ್ಲರೂ ದೀಕ್ಷೆ ತೊಡಬೇಕೆಂದು ಹುರಿದುಂಬಿಸಿದರು.