ಸಂಸತ್ತಿನಲ್ಲಿ ಮಾತನಾಡಲು ಸಾಕಷ್ಟಿದೆ: ದೇವೇಗೌಡ
ಬೆಂಗಳೂರು: ಫಲಿತಾಂಶಕ್ಕೂ ಮುನ್ನವೇ ತೃತೀಯ ರಂಗಕ್ಕೆ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿರುವ ಕಾಂಗ್ರೆಸ್ಸಿಗೆ ಈಗ ತಪ್ಪಿನ ಅರಿವಾಗಿದೆ. ತನ್ನ ಅವನತಿಗೆ ತಾನೇ ಕಾರಣವಾಗಿದ್ದಕ್ಕೆ ಪಶ್ಚಾತಾಪ ಪಡುವ ದುರ್ಗತಿ ಬಂದಿದೆಎಂದು ಮಾಜಿ ಪ್ರಧಾನಿ ದೇವೇಗೌಡ ಲೇವಡಿ ಮಾಡಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡ ಜಯಂತ್ಯುತ್ಸವ ಹಾಗೂ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮತ್ತೊಮ್ಮೆ ಪ್ರಧಾನಿಯಾಗಲೇಬೇಕೆಂಬ ಅಪೇಕ್ಷೆ ನನಗಿಲ್ಲ. ಆದರೆ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ದೃಢವಾದ ನಂಬಿಕೆ ಇದೆ. ಮುಂದೆ ಕೇಂದ್ರದಲ್ಲಿ ಏನಾಗುತ್ತೆ ಅನ್ನುವುದೂ ಗೊತ್ತಿದೆ. ಸಂಸತ್ತಿನಲ್ಲಿ ಮುಂದೆ ಮಾತನಾಡುವ ವಿಚಾರಗಳು ಸಾಕಷ್ಟಿವೆ. ಹಿಂದೆ ಕಾಂಗ್ರೆಸ್ ಮಾಡಿದ ತಪ್ಪಿಗೆ ಈಗ ಪಶ್ಚಾತಾಪದ ಫಲವಾಗಿ ತೃತೀಯ ರಂಗಕ್ಕೆ ಬೆಂಬಲ ನೀಡುವ ಮಾತನಾಡುತ್ತಿದೆ ಎಂದು ಕುಟುಕಿದರು. ಒಕ್ಕಲಿಗ ಸಮುದಾಯ ಆರಂಭದಿಂದಲೂ ಬಡತನದಿಂದಲೇ ಬಂದಿದೆ. ಹೋರಾಟದ ಹಾದಿಯಲ್ಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ.
ಮುಂದಿನ ದಿನಗಳಲ್ಲೂ ಸಮುದಾಯವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಕೆಲಸ ಒಕ್ಕಲಿಗ ಸಂಘ ಮತ್ತು ಸಮುದಾಯದ ನಾಯಕರಿಂದ ಆಗಬೇಕಿದೆ ಎಂದರು. ಶಾಸಕ ಹಾಗೂ ಮಾಜಿ ಸಚಿವ ಚಲುವರಾಯ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಬಿ. ರಾಮಕೃಷ್ಣ ವೇದಿಕೆಯಲ್ಲಿದ್ದರು. ಹೊ. ಶ್ರೀನಿವಾಸಯ್ಯ, ರಾಜ್ಯ ಮುಕ್ತ ವಿವಿ ಕುಲಪತಿ ಡಾ. ಎಂ.ಜಿ. ಕೃಷ್ಣನ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಲಕ್ಕೇಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.