ಸೃಜನಶೀಲ ವ್ಯಕ್ತಿತ್ವ ಬೆಳೆಸದ ಶಿಕ್ಷಣ ವ್ಯರ್ಥ
ದೊಡ್ಡಬಳ್ಳಾಪುರ: ಸೃಜನಶೀಲ ವ್ಯಕ್ತಿತ್ವವನ್ನು ಬೆಳೆಸದ ಶಿಕ್ಷಣ ವ್ಯರ್ಥ. ಕೇವಲ ವಿದ್ಯಾವಂತರನ್ನು ಸೃಷ್ಟಿಸುವುದು ಶಿಕ್ಷಣದ ಉದ್ದೇಶವಾಗಿರದೆ ಪ್ರಜ್ಞಾವಂತ ಸಮುದಾಯವನ್ನು ಸೃಷ್ಟಿಸುವುದು ಮೂಲ ಉದ್ದೇಶವಾಗಬೇಕು ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹನುಮಂತರಾಯಪ್ಪ ಹೇಳಿದರು.
ಇಲ್ಲಿನ ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಸಮೃದ್ಧಿ-2014 ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಆಲೋಚನಾ ಕ್ರಮ ಬಲಿಷ್ಠವಾಗಿರುತ್ತದೆ. ಕಲಾವಂತಿಕೆ ಮತ್ತು ಚಿಂತನಶೀಲತೆ ಎರಡೂ ಇದ್ದರೂ ಪ್ರೋತ್ಸಾಹ ಮತ್ತು ಸೂಕ್ತ ವೇದಿಕೆಗಳ ಕೊರತೆಯಿಂದ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬಾರದೇ ಹೋಗುತ್ತಿವೆ. ಅಂತಹ ಪ್ರತಿಭೆಗಳನ್ನು ಉತ್ತೇಜಿಸುವ ಕೆಲಸ ಅನಿವಾರ್ಯವಾಗಿ ಆಗಲೇ ಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಅನನ್ಯ. ದೂರ ದೂರುಗಳಿಂದ ಬಂದು ಅಧ್ಯಯನಶೀಲರಾಗುವ ವಿದ್ಯಾರ್ಥಿಗಳು ತಮ್ಮ ವಿಭಿನ್ನ ಅಭಿರುಚಿಗಳನ್ನು ಸಾಮಾಜಿಕ ಬದಲಾವಣೆ ಮತ್ತು ಬೆಳವಣಿಗೆಗೆ ಪೂರಕವಾಗಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣದ ನಿಜವಾದ ಅರ್ಥ ಈಡೇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀದೇವರಾಜ ಅರಸು ವಿದ್ಯಾ ಸಂಸ್ಥೆಯ ಟ್ರಸ್ಟಿ ಜೆ.ರಾಜೇಂದ್ರ ಮಾತನಾಡಿ, ದೊಡ್ಡಬಳ್ಳಾಪುರದಂತಹ ಪ್ರದೇಶದಲ್ಲಿ ಎಲ್ಲ ಬಗೆಯ ಸವಲತ್ತುಗಳನ್ನು ಪರಿಪೂರ್ಣವಾಗಿ ನೀಡಿ, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾದ ಶಿಕ್ಷಣವನ್ನು ನೀಡುತ್ತಿರುವು ನಮ್ಮ ಸಂಸ್ಥೆಯ ಹೆಮ್ಮೆ. ಇಂದಿನ ಅನಿವಾರ್ಯಗಳಿಗೆ ಪೂರಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳಾಗುತ್ತಿವೆ. ಅದು ಸುಧಾರಿತ ಮಾದರಿ ಶಿಕ್ಷಣವನ್ನು ಕೊಡಲು ಪೂರಕವಾಗಿರಬೇಕು ಎಂದರು.
ಪ್ರಾಂಶುಪಾಲ ಜೆ.ವಿ.ಚಂದ್ರಶೇಖರ್ ಕಾಲೇಜು ವಾರ್ಷಿಕ ವರದಿ ಮಂಡಿಸಿದರು. ಎಂ.ಚಿಕ್ಕಣ್ಣ ಎನ್ಎಸ್ಎಸ್ ವರದಿ ಮಂಡಿಸಿದರು. ವಿಭಾಗ ಮುಖ್ಯಸ್ಥ ಕೆ. ದಕ್ಷಿಣಾಮೂರ್ತಿ, ಆಂಗ್ಲ ಭಾಷಾ ಸಹ ಪ್ರಾಧ್ಯಾಪಕ ಕೆ.ಆರ್. ರವಿಕಿರಣ್, ನಿರ್ವಹಣಾ ವಿಭಾಗದ ಪಿ.ಚೈತ್ರ, ಹಿರಿಯ ಪ್ರಾಧ್ಯಾಪಕ ವೆಂಕಟರೆಡ್ಡಪ್ಪ ಚೆಟ್ಟಿ, ವಾಣಿಜ್ಯ ವಿಭಾಗದ ಅಜಯಕುಮಾರ್, ಉಮೇಶ್, ಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗಗಳ ಅನೇಕ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.