ಇದು ಬಸ್ ನಿಲ್ದಾಣವೋ...ಆಟೋ ನಿಲ್ದಾಣವೋ...?
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಏ.28
ಇದು ಬಸ್ ನಿಲ್ದಾಣವೋ, ಆಟೋ ನಿಲ್ದಾಣವೋ, ತಳ್ಳುಗಾಡಿ ಅಂಗಡಿಗಳ ನಿಲ್ದಾಣವೋ... ಆ ದೇವರಿಗೇ ಗೊತ್ತು. ಅವ್ಯವಸ್ಥೆಯ ಆಗರ ಎಂಬುದಕ್ಕೆ ದೊಡ್ಡಬಳ್ಳಾಪುರ ಬಸ್ ನಿಲ್ದಾಣ ಸ್ಪಷ್ಟ ಉದಾಹರಣೆ ಎನ್ನುವಂತಾಗಿದೆ. ನಗರದ ಹೃದಯ ಭಾಗದಲ್ಲಿರುವ ನಗರಸಭೆ ಬಸ್ ನಿಲ್ದಾಣ (ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣ)ದಲ್ಲಿ ಬಸ್ಸುಗಳೂ ನಿಲ್ಲಲೂ ಸ್ಥಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಜನ ಓಡಾಡಲೂ ಸಾಧ್ಯವಾಗದ ಕಿಷ್ಕಿಂದ ಪರಿಸ್ಥಿತಿ ಉಂಟಾಗಿದೆ.
ಬಸ್ ನಿಲ್ದಾಣದ ಫುಟ್ಪಾತ್ ಅತಿಕ್ರಮಣವಾಗಿ ಹಲವು ತಿಂಗಳುಗಳೇ ಕಳೆದಿವೆ. ಬಸ್ ನಿಲ್ಲಿಸುವ ವ್ಯವಸ್ಥೆ ಬದಲಿಸುವ ಮೂಲಕ ನಿಲ್ದಾಣದ ಟ್ರಾಫಿಕ್ ಸಮಸ್ಯೆ ನಿಗ್ರಹಿಸುವ ಮನಸ್ಸು ಮಾಡಿರುವ ಪೊಲೀಸರು ಮತ್ತೊಂಡೆದೆ ನಾಗರಿಕರ ಸಂಚಾರಕ್ಕೆ ಮುಕ್ತವಾಗಬೇಕಿದ್ದ ಫುಟ್ಪಾತ್ ಅನ್ನು ಸಂಪೂರ್ಣವಾಗಿ ಹೂವು-ಹಣ್ಣಿನ ಅಂಗಡಿಗಳ ತಾಣವಾಗಿ ಮಾಡಿಬಿಟ್ಟಿದ್ದಾರೆ. ಇನ್ನು ಸಮೀಪದಲ್ಲೇ ಇರುವ ಪುರಭವನ, ಅದರ ಸುತ್ತಮುತ್ತಲ ಜಾಗ ಅನಧಿಕೃತ ಪಾರ್ಕಿಂಗ್ ತಾಣವಾಗಿ, ಬೀದಿ ಬದಿ ವ್ಯಾಪಾರಿಗಳ ಭರಾಟೆಗೆ ಸಾಕ್ಷಿಯಾಗಿದೆ. ಬಸ್ಸಿಗಾಗಿ ಬರುವ ಸಾವಿರಾರು ಜನ ನಿಲ್ಲಲೂ ಇಲ್ಲಿ ಸ್ಥಳವಿಲ್ಲ. ಇನ್ನು ನಗರಸಭೆ ಬಸ್ ತಂಗುದಾಣ ಕೆಲ ಕುಡುಕರ ಆವಾಸ ಸ್ಥಾನವಾಗಿದೆ. ಮಹಿಳೆಯರು ಮಕ್ಕಳು ಸುಳಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ.
ಆಟೋಗಳ ಆಟಾಟೋಪ: ಇಡೀ ಬಸ್ ನಿಲ್ದಾಣವನ್ನು ಆಕ್ರಮಿಸಿಕೊಂಡಿರುವುದು ಆಟೋಗಳು ಎಂದರೆ ತಪ್ಪಲ್ಲ. ವಾಸ್ತವವಾಗಿ ಬಸ್ ನಿಲ್ದಾಣದಿಂದ 200 ಮೀಟರ್ ಹೊರಗೆ ಆಟೋ, ಟೆಂಪೋ ಸೇರಿದಂತೆ ಇತರೆ ಸರಕು ಸಾಗಾಣಿಕೆ ವಾಹನಗಳ ನಿಲ್ದಾಣ ಇರಬೇಕು ಎಂಬುದು ನಿಯಮ. ಆದರೆ ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿ ಬರೋಬ್ಬರಿ 6 ಆಟೋ ನಿಲ್ದಾಣಗಳಿವೆ. ನಗರಸಭಾ ವಾಣಿಜ್ಯ ಮಳಿಗೆ ಮುಂಭಾಗ ಸಂಪೂರ್ಣವಾಗಿ ಆಟೋ ನಿಲ್ದಾಣಕ್ಕೆ ಇತ್ತೀಚೆಗೆ ಅವಕಾಶ ಕೊಡಲಾಗಿದೆ. ಮಹಿಳಾ ಸಮಾಜದ ಪಕ್ಕ, 16 ಕಣ್ಣಿನ ಬಾವಿ ಸಮೀಪ ಹಿಂದಿನಿಂದಲೂ ಆಟೋ ನಿಲ್ದಾಣ ಇದೆ. ಅದೂ ಸಾಲದೆಂಬಂತೆ ಹೇಮಾವತಿಪೇಟೆ ಮುಖ್ಯರಸ್ತೆಯಲ್ಲೂ ಆಟೋಗಳೇ ಅವ್ಯಾಹತ. ಎಸ್ಬಿಐ ಮುಂಭಾಗ ಲಗೇಜ್ ಆಟೋಗಳ ಅನಧಿಕೃತ ನಿಲ್ದಾಣ, ಅಲ್ಲದೆ
ಸೌಂದರ್ಯ ಮಹಲ್ ವೃತ್ತವೂ ಕೂಡ ಆಟೋ ನಿಲ್ದಾಣವಾಗಿ ಮಾರ್ಪಟ್ಟಿದೆ.
ಅಲ್ಲದೆ ಓವರ್ಲೋಡ್ ತುಂಬಿಕೊಂಡು ರಸ್ತೆಯಲ್ಲಿ ಇತರ ವಾಹನಗಳಿಗೂ ತೊಂದರೆಯಾಗುತ್ತಿದೆ. ಇವುಗಳನ್ನು ನಿಯಂತ್ರಿಸಲು ಇಲ್ಲಿನ ಪೊಲೀಸರೂ ತಲೆಕೆಡಿಸಿಕೊಂಡಿಲ್ಲ ಎಂಬುದು ಜನರ ಆರೋಪ.
ದಿನಕ್ಕೆ 600 ಬಸ್
ಈ ಬಸ್ ನಿಲ್ದಾಣದಲ್ಲಿ ದಿನಕ್ಕೆ ಕನಿಷ್ಠ 750 ಬಸ್ಸುಗಳು ಬಂದು ಹೋಗುತ್ತವೆ. 200 ಸರ್ಕಾರಿ ಮತ್ತು 80 ಖಾಸಗಿ ಬಸ್ಸುಗಳು ದಿನನಿತ್ಯ ಐದಾರು ಬಾರಿ ನಿಲ್ದಾಣ ಪ್ರವೇಶಿಸಿ ಹೊರಹೋಗುತ್ತಿವೆ. ತೀರಾ ಕಿಷ್ಕಿಂದವಾಗಿರುವ ಈ ಪ್ರದೇಶದಲ್ಲಿ ಸಮರ್ಪಕ ವ್ಯವಸ್ಥೆ ನಿಯಂತ್ರಿಸಬೇಕಾದರೆ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು. ಅನಧಿಕೃತ ಆಟೋ ನಿಲ್ದಾಣಗಳನ್ನು ಎತ್ತಂಗಡಿ ಮಾಡಬೇಕು. ಬಸ್ಸುಗಳು ನಿಲ್ಲುವ ಸ್ಥಳಾವಕಾಶವನ್ನು ಮುಕ್ತವಾಗಿಸಬೇಕು. ಈಗಿರುವ ಬಸ್ ನಿಲ್ದಾಣವನ್ನು ಬಿಎಂಟಿಸಿ ಮತ್ತು ಖಾಸಗಿ ಬಸ್ಸುಗಳಿಗೆ ಮಾತ್ರ ಸೀಮಿತಗೊಳಿಸಿ, ಹೊಸ ಬಸ್ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಅವಕಾಶ ಕೊಡಬೇಕು. ಬರುವ ಪ್ರಯಾಣಿಕರು ಕುಳಿತುಕೊಳ್ಳಲು ಸಮರ್ಪಕ ಪ್ಲಾಟ್ಫಾರಂ ನಿರ್ಮಾಣ ಮಾಡಬೇಕು ಎಂಬುದು ಜನರ ಆಗ್ರಹ.
ಕೆ.ಆರ್.ರವಿಕಿರಣ್