ಇದೊಂಥರಾ ಚೆಲುವಿನ ಚಿತ್ತಾರ ಸಿನೆಮಾದ ಪ್ರೇಮ್ ಕಹಾನಿ...
ಕ.ಪ್ರ.ವಾರ್ತೆ, ರಾಮನಗರ ಏ.28
ಇದೊಂಥರಾ ಚೆಲುವಿನ ಚಿತ್ತಾರ ಸಿನೆಮಾದ ಪ್ರೇಮ್ ಕಹಾನಿ, ಅಂಬಾರಿ ಸಿನೆಮಾದಲ್ಲಿ ಪರಾರಿ ಆದ ಪ್ರೇಮಿಗಳನ್ನು ಹೋಲುವ ಹುಚ್ಚು ಪ್ರೀತಿಯೂ ಹೌದು. ಹದಿನಾರರ ಹುಚ್ಚುಕೋಡಿಯ ಮನಸ್ಸಿನ ಹುಡುಗಿ ಕಡೆಗೆ ಪೋಷಕರನ್ನು ಅಪ್ಪಿದರೆ, ಅಂಧ ಪ್ರೀತಿಗೆ ಬಿದ್ದ ಹುಡುಗ ಪೊಲೀಸರಿಂದ ಬಂಧಿಯಾಗಿದ್ದಾನೆ.
ಇದು, ಎರಡು ಸಿನೆಮಾ ಚಿತ್ರಕತೆಗಳನ್ನು ಕೂಡಿಸಿ ಇಲ್ಲವೇ ಯಾವುದೋ ಕಾಲ್ಪನಿಕ ಕತೆಯನ್ನಾಧರಿಸಿ ತೆಗೆದ ಚಿತ್ರದ ಸ್ಟೋರಿಯಲ್ಲ. ಬದಲಿಗೆ ಯವಸ್ಸಲ್ಲದ ವಯಸ್ಸಿನಲ್ಲಿ ಪ್ರೇಮ ಪಾಶಕ್ಕೆ ಸಿಲುಕಿ, ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳ ಅರ್ಥವಿಲ್ಲದ ವ್ಯರ್ಥ ಪ್ರೀತಿಯ ಕತೆ.
ಪ್ರಬುದ್ಧರಾದ ಮೇಲೆ ಪ್ರೀತಿಸಿ, ಸಪ್ತಪದಿ ತುಳಿದರೆ ಅದಕ್ಕೊಂದು ಅರ್ಥವಿದೆ. ಆದರೆ, ಅಪ್ರಾಪ್ತ ಪ್ರೀತಿ, ಪ್ರಣಯಕ್ಕೆ ಗುರಿ ಇರದು. ಇಂತಹ ಅನೇಕ ಪ್ರಕರಣಗಳು ನಮ್ಮ ಕಣ್ಮುಂದಿವೆ. ಇದೀಗ ಅದಕ್ಕೆ ಮತ್ತೊಂದು ಪ್ರಕರಣ ರಾಮನಗರ ಜಿಲ್ಲೆಯಲ್ಲಿ ಸೇರಿಕೊಂಡಿದೆ.
ಆ ಬಾಲಕಿ ಈಚೆಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 14ರ ಬಾಲಕಿ. ಆಕೆಯನ್ನು ಪ್ರೀತಿಸಿ, ಬೈಕ್ಹತ್ತಿಸಿಕೊಂಡು ಪರಾರಿಯಾದ ಪ್ರಿಯತಮನದ್ದು 20ರ ತಾರುಣ್ಯ. ಇಬ್ಬರ ನಡುವೆ ಕೆಲ ದಿನಗಳಿಂದ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.
ಶಾಲಾವಧಿಗೆ ಮುನ್ನ, ನಂತರ ಪ್ರೇಮಿಗಳಿಬ್ಬರ ಭೇಟಿ ತಪ್ಪುತ್ತಿರಲಿಲ್ಲ. ಆ ಹುಡುಗಿಯ ಪರೀಕ್ಷೆ ಮುಗಿದ ದಿನವೇ ಆಕೆಯನ್ನು ಹುಡುಗ ಬೈಕ್ ಹತ್ತಿಸಿಕೊಂಡು ಪರಿಯಾದನು. ಈ ಬಗ್ಗೆ ಹುಡುಗಿ ಪೋಷಕರು ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ದೂರು ನೀಡಿದ್ದರು.
ಚೆಲುವಿನ ಚಿತ್ತಾರದಂತೆ ಅಪ್ರಾಪ್ತ ಪ್ರೇಮಿಗಳದ್ದು ಜಾತಿ ಬೇರೆಯೇ. ಅಂಬಾರಿಯಲ್ಲಿ ಹೀರೋ ಪ್ರಿಯತಮೆಯನ್ನು ಸೈಕಲ್ನಲ್ಲೇ ತಾಜ್ ಮಹಲ್ಗೆ ಕರೆದೊಯ್ದ. ಆದರೆ, ಈ ಕತೆ ಹೀರೋ ಬೈಕ್ನಲ್ಲಿ ಹಲವು ಜಿಲ್ಲೆ ಸುತ್ತಾಡಿಸಿದ್ದಾನೆ.
ಪ್ರೇಮಿಗಳು ಬೈಕಿನಲ್ಲಿ ಹಗಲು ರಾತ್ರಿಯೆನ್ನದೇ ಮಡಿಕೇರಿ, ಮೈಸೂರು, ಮಲ್ಪೆ, ಮಂಗಳೂರು, ಧರ್ಮಸ್ಥಳ, ಹೊರನಾಡು, ಶೃಂಗೇರಿ ಸೇರಿದಂತೆ ನಾನಾ ಕಡೆ ಸುತ್ತಾಡಿದ್ದಾರೆ. ಕಡೆಗೆ, ಚಿತ್ರದುರ್ಗದಲ್ಲಿ ಸಣ್ಣ ಮನೆ ಮಾಡಿಕೊಂಡು ಸಂಸಾರ ಹೂಡಲು ತೀರ್ಮಾನಿಸಿದ್ದರು.
ಅವರಿಬ್ಬರ ಮೊಬೈಲ್ ಯಾವ ಟವರ್ ವ್ಯಾಪ್ತಿಯಲ್ಲಿದೆ ಎನ್ನುವುದನ್ನು ಅನುಸರಿಸಿ, ಅವರನ್ನು ಹಿಡಿಯಲು ಪೊಲೀಸರು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಕಡೆಗೆ ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದ ಅವರನ್ನು ಈ ಜಿಲ್ಲೆ ಠಾಣೆಯೊಂದರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಠಾಣೆಗೆ ಕರೆತಂದಾಗ ಮೊದಲಿಗೆ ಆ ಹುಡುಗಿ ಮನೆಗೆ ಹೋಗಲು ನಿರಾಕರಿಸಿದ್ದಳು. ಕಡೆಗೆ, ಪೋಷಕರು ಎದುರಿಗೆ ಬರುತ್ತಿದ್ದಂತೆಯೇ ಅವರನ್ನು ಅಪ್ಪಿ ಕಣ್ಣೀರಿನಲ್ಲಿ ತನ್ನ ಅಪ್ರಬುದ್ಧ ಪ್ರೀತಿಯ ಕೊಳೆಯನ್ನು ತೊಳೆದಿದ್ದಾಳೆ.
ಅಪ್ರಾಪ್ತೆಯನ್ನು ಅಪಹರಿಸಿದ ಆರೋಪದಡಿ ದಾಖಲಾದ ಪ್ರಕರಣದಲ್ಲಿ ಹುಡುಗ ಜೈಲು ಸೇರುವಂತಾಗಿದೆ.
ಸದ್ಯ ಹುಡುಗಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಅದರ ವರದಿ ಬಂದ ನಂತರ ಹುಡುಗನಿಗೆ ಇನ್ನೇನು ಕಾದಿದೆಯೋ ಗೊತ್ತಿಲ್ಲ.
ಮತ್ತೀಕೆರೆ ಜಯರಾಮ್