ರಾಮ್ದೇವ್ ಹೇಳಿಕೆ ಖಂಡಿಸಿ ಪ್ರತಿಭಟನೆ
ರಾಮನಗರ: ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಯೋಗಗುರು ಬಾಬಾ ರಾಮ್ದೇವ್ ಅವರನ್ನು ದೇಶದ್ರೋಹಿ ಎಂದು ಪರಿಗಣಿಸಿ, ಭಾರತದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ನಗರದ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ರಾಮ್ದೇವ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಐಜೂರು ವೃತ್ತದವರೆಗೆ ಮೆರವಣಿಗೆ ನಡೆಸಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮ್ದೇವ್ ಭಾವಚಿತ್ರವನ್ನು ದಹಿಸಿ, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬಾಬಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ದಲಿತ ವಿರೋಧಿ: ರಾಹುಲ್ಗಾಂಧಿ ಹನಿಮೂನ್ ಮಾಡಿಕೊಳ್ಳಲು ದಲಿತರ ಮನೆಗೆ ತೆರಳುತ್ತಾರೆ ಎಂದು ಹೇಳುವ ಮೂಲಕ ಬಾಬಾ ದಲಿತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಾಬಾ ಹೇಳಿಕೆ ದಲಿತ ದೌರ್ಜನ್ಯ ತಡೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾಯ್ದೆಯಡಿ ರಾಮ್ದೇವ್ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು. ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಕ್ರಮ ಸಂಪಾದನೆ: ಬಾಬಾ ಸಹಸ್ರಾರು ಕೋಟಿ ಹಣವನ್ನು ವಾಮ ಮಾರ್ಗದಿಂದ ಸಂಪಾದಿಸಿದ್ದಾರೆ. ಈ ಕಪಟಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಅಧ್ಯಕ್ಷ ರಾಂಪುರ ನಾಗೇಶ್, ರಾ.ಶಿ.ದೇವರಾಜು, ಸೋಮಶೇಖರ್, ಶಿವಕುಮಾರಸ್ವಾಮಿ, ಶಿವಶಂಕರ್, ರವಿಕುಮಾರ್ ಇತರರು ಭಾಗವಹಿಸಿದ್ದರು.