ನಾಲ್ಕು ಕೇಂದ್ರಗಳಲ್ಲಿ ಸಿಇಟಿ
ಕ.ಪ್ರ.ವಾರ್ತೆ ರಾಮನಗರ ಏ. 29
ಈ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಸಿಇಟಿ ಸಾಮಾನ್ಯ ಪರೀಕ್ಷೆಗಾಗಿ 4 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 1339 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲಿಂಗರಾಜು ತಿಳಿಸಿದ್ದಾರೆ.
ಮೇ 1 ಮತ್ತು 2 ರಂದು ಪರೀಕ್ಷೆ ನಡೆಯಲಿದೆ. ಮೇ 1 ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ಗಣಿತ, ಮೇ 2 ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾನಯಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳು: ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 400 ವಿದ್ಯಾರ್ಥಿಗಳು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 466, ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 244, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 299 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದ ಬಗ್ಗೆ ಮೊ.98802-17746, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಾಗಿ ವಿದ್ಯಾರ್ಥಿಗಳು ದೂ. 080-2227182, ಮೊ.99645- 39550 ಸಂಪರ್ಕಿಸಬಹುದಾಗಿದೆ.
ಅಂತೆಯೇ, ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರ ಕುರಿತು ದೂ.080-27251444, ಮೊ.944 95-25108, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರ ಸಂಬಂಧಿತ ಮಾಹಿತಿಗಾಗಿ ಮೊ.99009-31326 ಸಂಪರ್ಕಿಸಲು ಸೂಚನೆ ನೀಡಲಾಗಿದೆ.
ಮೇಲ್ವಿಚಾರಕರ ನೇಮಕ: ಜಿಲ್ಲಾಧಿಕಾರಿ ಅವರು ಸಿಇಟಿ ಪರೀಕ್ಷೆಯ ಮುಖ್ಯ ಪರೀಕ್ಷಕರಾಗಿರುತ್ತಾರೆ. ಆಯಾ ಕಾಲೇಜು ಪ್ರಾಂಶುಪಾಲರು ಉಪ ಮುಖ್ಯ ಪರೀಕ್ಷಕರುಗಳಾಗಿರುತ್ತಾರೆ. ಪ್ರತಿ ಕೇಂದ್ರಕ್ಕೂ ಒಬ್ಬರು ಮೇಲ್ವಿಚಾರಕರನ್ನು ನೇಮಿಸಿದ್ದು, 4 ಪರೀಕ್ಷಾ ಕೇಂದ್ರಗಳಿಗೂ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಎರಡು ತ್ರಿಸದಸ್ಯ ಸಮಿತಿ ರಚಿಸಲಾಗಿದೆ.
ಒಂದು ಕೊಠಡಿಯಲ್ಲಿ ಗರಿಷ್ಠ 16 ವಿದ್ಯಾರ್ಥಿಗಳಿರುತ್ತಾರೆ. ಪ್ರತಿ ಕೊಠಡಿಗೆ ಒಬ್ಬರು ಮೇಲ್ವಿಚಾಕರನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ನಿಯೋಜಿಸಲಾಗುವುದು. ಮೇಲ್ವಿಚಾರಕರನ್ನು ನೇಮಿಸುವಾಗ ವಿಜ್ಞಾನ ಉಪನ್ಯಾಸಕರಿಗೆ ಅವಕಾಶ ನೀಡುವುದಿಲ್ಲ. ತುರ್ತು ಚಿಕಿತ್ಸೆಗಾಗಿ ಪ್ರತಿ ಕೇಂದ್ರಕ್ಕೂ ಆರೋಗ್ಯ ಸಹಾಯಕಿಯರನ್ನು ನೇಮಿಸಲಾಗುತ್ತಿದೆ.
ಮಾರ್ಗಸೂಚಿ ಪಾಲನೆ: ಸಿಇಟಿ ಪರೀಕ್ಷಾ ಕಾರ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿರುವ ಮಾರ್ಗಸೂಚಿಯನ್ನು ಕಡ್‌ಡಾಯವಾಗಿ ಪಾಲಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪರೀಕ್ಷಾ ಕೇಂದ್ರಕ್ಕೆ, ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರದಿಂದ ಖಜಾನೆಗೆ ಕೊಂಡೊಯ್ಯುವಾಗ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.