ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಡದಿ ಕೊಂದವಗೆ ಜೀವಾವಧಿ

Mainashree
Updated On : 30 Apr 2014, 12:00 pm

ಕ.ಪ್ರ.ವಾರ್ತೆ  ರಾಮನಗರ  ಏ. 29
ತಾಲೂಕಿನ ಮಾಯಗಾನಹಳ್ಳಿಯಲ್ಲಿ ಪತ್ನಿಯ ಎರಡೂ ಕೈ ಕತ್ತರಿಸಿ, ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗೆ ಇಲ್ಲಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಸಜೆ, ರು.22 ಸಾವಿರ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಬೆಂಗಳೂರಿನ ಗುಟ್ಟಹಳ್ಳಿಯಲ್ಲಿ ವಾಸವಾಗಿರುವ ಮೂಲತಃ ಮಾಗಡಿ ತಾಲೂಕು ಮಾದೇಗೌಡನದೊಡ್ಡಿ ಗ್ರಾಮದ ಶ್ರೀನಿವಾಸ ಶಿಕ್ಷೆಗೊಳಗಾಗಿರುವ ಆರೋಪಿ.
ಈತ 2011ರ ಆ.11ರಂದು ಮಾಯಗಾನಹಳ್ಳಿಯ ತನ್ನ ತವರಿನಲ್ಲಿದ್ದ ಪತ್ನಿ ಮಮತಾಳನ್ನು ಹತ್ಯೆ ಮಾಡಿದ್ದನು. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್ಸೈ ಪ್ರವೀಣ್‌ಬಾಬು, ಡಿವೈಎಸ್ಪಿ ರಾಮಕೃಷ್ಣಪ್ಪ ಸಲ್ಲಿಸಿದ್ದ ದೋಷಾರೋಪ ಪಟ್ಟಿ  ಮೇರೆಗೆ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶ ಕೆ.ಸುರೇಶ್ ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ.  ಆರೋಪಿ ಶ್ರೀನಿವಾಸನಿಗೆ ಐಪಿಸಿ ಕಲಂ 498(ಎ) ಅಪರಾಧಕ್ಕಾಗಿ 2 ವರ್ಷ ಸಾದಾ ಸಜೆ, ರು.2 ಸಾವಿರ ದಂಡ ಮತ್ತು ಐಪಿಸಿ ಕಲಂ 302ರ ಪ್ರಕಾರ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ, ರು.20 ಸಾವಿರ ದಂಡ ವಿಧಿಸಲಾಗಿದೆ. ಅಪರಾಧಿ ಕಟ್ಟುವ ಸಂಪೂರ್ಣ ದಂಡ ಮೊತ್ತವನ್ನು ಮೃತ ಮಮತಾ ತಾಯಿ ಸುಶೀಲಮ್ಮ ಅವರಿಗೆ ಪಾವತಿಸಲು ತೀರ್ಪಿನಲ್ಲಿ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ದಿನಕರ್ ವಾದ ಮಂಡಿಸಿದರು.
ಪ್ರಕರಣದ ವಿವರ: ಮಾಯಗಾನಹಳ್ಳಿಯ ಪುಟ್ಟಸ್ವಾಮಯ್ಯ-ಸುಶೀಲಮ್ಮ ಮಗಳು ಮಮತಾಳನ್ನು 2005ರ ಜೂ.29ರಂದು ಶ್ರೀನಿವಾಸನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮಮತಾ ಪೋಷಕರು ಆಗ ನಗದು ಸಹಿತ ಸಾಕಷ್ಟು ವರೋಪಚಾರ ಮಾಡಿದ್ದರು. ಸಾಕಷ್ಟು ಬಾರಿ ಮಮತಾ ಮೇಲೆ ಹಲ್ಲೆ ನಡೆದು, ನ್ಯಾಯ ಪಂಚಾಯಿತಿಯೂ ಆಗಿತ್ತು. ಮದುವೆಯಾಗಿ ಆರು ವರ್ಷವಾದರೂ ದಂಪತಿಗೆ ಮಕ್ಕಳಾಗಲಿಲ್ಲ. ಶೀಲದ ಬಗ್ಗೆ ಶಂಕಿಸುತ್ತಾ ಕಿರುಕುಳ ನೀಡುತ್ತಿದ್ದ ಪತಿ ವರ್ತನೆಯಿಂದ ಬೇಸತ್ತ ಮಮತಾ ತವರು ಮನೆ ಸೇರಿಕೊಂಡಿದ್ದಳು.
ಮನೆಗೆ ನುಗ್ಗಿ ಕೊಲೆ: ಶ್ರೀನಿವಾಸನು ಕಬ್ಬಿಣದ ಮಚ್ಚನ್ನು ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು 2011ರ ಆ.11ರಂದು ಮಾಯಗಾನಹಳ್ಳಿಗೆ ಬಂದವನೇ ನೇರವಾಗಿ ತನ್ನ ಮಾವನ ಮನೆಗೆ ನುಗ್ಗಿದನು. ಅಲ್ಲಿದ್ದ ಪತ್ನಿ ಮಮತಾ ಮೇಲೆರಗಿ ಒಂದಾದ ಮೇಲೊಂದರಂತೆ ಎರಡೂ ಕೈ ಕತ್ತರಿಸಿದನು. ಬಳಿಕ ತಲೆ ಮತ್ತು ಹೊಟ್ಟೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದನು. ಚೀರಾಡಿದ ಮಮತಾ ರಕ್ತಸ್ರಾವದೊಂದಿಗೆ ಸ್ಥಳದಲ್ಲೇ ಅಸುನೀಗಿದ್ದರು. ಆರೋಪಿ ಶ್ರೀನಿವಾಸ ಕೃತ್ಯವೆಸಗಿದ ನಂತರ ರಕ್ತಸಿಕ್ತ ಮಚ್ಚಿನೊಂದಿಗೆ ರಾಮನಗರ ಗ್ರಾಮಾಂತರ ಠಾಣೆಗೆ ಆಗಮಿಸಿ ಶರಣಾಗಿದ್ದನು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement