ಮರಸನಾಡಮ್ಮ ಅಗ್ನಿಕೊಂಡೋತ್ಸವ
ಕನಕಪುರ: ತಾಲೂಕಿನ ಮಳಗಾಳು ಗ್ರಾಮದ ಮರಸನಾಡಮ್ಮ ದೇವಿಯ ಅಗ್ನಿಕೊಂಡೋತ್ಸವ ಪ್ರಯುಕ್ತ ಕಳಸಾರಾಧನೆಗೆ ಚಾಲನೆ ನೀಡಲಾಯಿತು. ಗ್ರಾಮದ ಎಲ್ಲಾ ಮುಖಂಡರ ಮನೆಗಳಲ್ಲಿ ಕಳಸಪೂಜೆ, ಮೆರವಣಿಗೆ ನಡೆಯಿತು. ಮಳಗಾಳಿನ ಈಶ್ವರ ದೇವಾಲಯದಿಂದ ಕಳಸಪೂಜಾ ಮೆರವಣಿಗೆ ಹೊರಟು ಮಾದಪ್ಪ, ಹುಣಸನಹಳ್ಳಿಯಮ್ಮ, ಮರಸನಾಡಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಅಗ್ನಿಕೊಂಡೋತ್ಸವಕ್ಕೆ ನಾಂದಿ ಹಾಡಲಾಯಿತು.
ನಾಳೆ ನಡೆಯಲಿರುವ ಅಗ್ನಿಕೊಂಡೋತ್ಸವಕ್ಕೆ ಸೌದೆಯನ್ನು ಅಲಂಕೃತ ಎತ್ತಿನಗಾಡಿಗಳಲ್ಲಿ ಗ್ರಾಮದ ಮನೆಗಳಲ್ಲಿ ಪೂಜೆ ಸ್ವೀಕರಿಸಿ ದೇವಾಲಯ ಆವರಣದಲ್ಲಿ ನಿರ್ಮಿಸಲಾಗಿರುವ ಕೊಂಡಕ್ಕೆ ನೀಡಲಾಯಿತು. ಗ್ರಾಮದ ಸಂಪ್ರದಾಯದಂತೆ ಇಲ್ಲಿನ ದೇಗುಲ ಮಠದಿಂದ ಶಕ್ತಿ ದೇವತೆಗಳನ್ನು ಒಳ ಮೆಟ್ಟಿಸಿಕೊಂಡು ಬಂದ ನಂತರ ಮಾದಪ್ಪನ ಕೊಂಡ,ನಂತರ ಹುಣಸನಹಳ್ಳಿಯಮ್ಮ ಮಡಿಕೊಂಡ ಹಾಗೂ ಮರಸನಾಡಮ್ಮ ಅಗ್ನಿಕೊಂಡೋತ್ಸವ ನಡೆಯಲಿದೆ ಎಂದು ಮರಸಪ್ಪ ರವಿ ತಿಳಿಸಿದ್ದಾರೆ.