ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಡಿವ ನೀರು ಕ್ರಿಯಾ ಯೋಜನೆ: ವಿಶ್ವನಾಥ್

Mainashree
Updated On : 1 May 2014, 12:17 pm

ರಾಮನಗರ: ಅವಳಿ ನಗರಗಳಾದ ರಾಮನಗರ-ಚನ್ನಪಟ್ಟಣಕ್ಕೆ ಮುಂದಿನ 25 ವರ್ಷಗಳ ಜನಸಂಖ್ಯೆ ಏರಿಕೆ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಹೇಳಿದರು.
ಮುಂದಿನ 25 ವರ್ಷಗಳಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರ ಪ್ರದೇಶಗಳಿಗೆ ದಿನನಿತ್ಯ 52 ಎಂಎಲ್‌ಡಿ ನೀರಿನ ಅಗತ್ಯತೆ ಎದುರಾಗುವ ನಿರೀಕ್ಷೆ ಇದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಿ, ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಕೆಗೆ ಮುಂದಾಗಿದ್ದೇವೆ. ಯೋಜನೆ ಅನುಷ್ಠಾನ ಬಳಿಕ ಉಭಯ ನಗರಗಳಲ್ಲಿ ನೀರಿನ ಬವಣೆ ಸಂಪೂರ್ಣ ನಿವಾರಣೆಯಾಗುತ್ತದೆ ಎಂದು
ಅವರು ಸುದ್ದಿಗಾರರಿಗೆ ತಿಳಿಸಿದರು.  
ಟೆಂಡರ್ ಪ್ರಕ್ರಿಯೆ: ಪ್ರಸ್ತುತ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ 18 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಅದೇ ಪೈಪ್‌ಲೈನ್ ಮೂಲಕ ಇನ್ನೂ 8 ಎಂಎಲ್‌ಡಿ ನೀರು ಪೂರೈಕೆ ಮಾಡಲು ಉದ್ದೇಶಿಸಿದ್ದು, ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಡಾ.ವಿಶ್ವನಾತ್ ವಿವರಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಮೇಲೆ ನಿಗಾ ವಹಿಸಲಾಗಿದೆ. ತೀರಾ ಅಗತ್ಯವಿರುವ 39 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ರೂಪಿಸಲಾಗಿರುವ 82 ಕ್ರಿಯಾ ಯೋಜನೆಗಳ ಪೈಕಿ 47 ಜಾರಿಯಲ್ಲಿವೆ. ಪಟ್ಟಣ ಪ್ರದೇಶಗಳಲ್ಲಿ ಟ್ಯಾಂಕರ್ ನೀರು ಸರಬರಾಜು ನಿಲ್ಲಿಸಲಾಗಿದೆ. ಬರ ಪರಿಹಾರ ನಿಧಿಯಡಿ ಪಟ್ಟಣ, ನಗರ ಪ್ರದೇಶಗಳಲ್ಲಿ ರು.1.35 ಕೋಟಿ ವೆಚ್ಚದ ಕ್ರಿಯಾ ಯೋಜನೆ ಜಾರಿಯಾಗಿದ್ದು, ಜಿಲ್ಲಾಡಳಿತದ ಬಳಿ ಇನ್ನೂ ರು.1.95 ಕೋಟಿ ಅನುದಾನ ಲಭ್ಯವಿದೆ ಎಂದು ತಿಳಿಸಿದರು.  
ಅಲ್ಪಮಟ್ಟಿನ ಕೊರತೆ: ಪ್ರಸಕ್ತ ಸಾಲಿನಲ್ಲಿ ರಾಮನಗರ ಜಿಲ್ಲೆಯಲ್ಲಿ 127 ಮಿ.ಮೀ. ಮಳೆಯನ್ನು ನಿರೀಕ್ಷಿಸಲಾಗಿತ್ತು. 102 ಮಿಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಆಶಾಭಾವನೆ ಹೊಂದಲಾಗಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎಲ್ಲೂ ಇಲ್ಲ. ಇನ್ನೂ 46 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದೆ ಎಂದು ವಿಶ್ವನಾಥ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement