ತುರುವನಹಳ್ಳಿ ಗ್ರಾಮದಲ್ಲಿ ಚಿರತೆ ಭೀತಿ
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ತುರುವನಹಳ್ಳಿ ಗ್ರಾಮದಲ್ಲಿ ಜನ ಚಿರತೆ ಭೀತಿಯಿಂದ ಕಂಗೆಟ್ಟಿದ್ದಾರೆ. ಗ್ರಾಮದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿರುವ ಹಿನ್ನಲೆಯಲ್ಲಿ ಜನ ಆತಂಕಕ್ಕೀಡಾಗಿದ್ದಾರೆ. ಕಳೆದ 1 ವಾರದಿಂದ ಚಿರತೆ ಆಗಾಗ್ಗೆ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮದ ಸುತ್ತ-ಮುತ್ತ ಕಾಡು ಪ್ರದೇಶ ಇದ್ದು, ಈ ಪ್ರದೇಶದಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿಯೊಬ್ಬನ ಮುಂದೆಯೇ ಎರಡು ಕುರಿಗಳನ್ನು ಎಳೆದೊಯ್ದಿದೆ ಎನ್ನಲಾಗಿದೆ. ಅಲ್ಲದೆ ಸುಮಾರು 10ಕ್ಕೂ ಹೆಚ್ಚು ಕುರಿಗಳು, ಕೋಳಿ, ನಾಯಿಗಳನ್ನು ಬೇಟೆಯಾಡಿರುವ ಚಿರತೆ ಇಡೀ ಪ್ರದೇಶದಲ್ಲಿ ಭಯದ ವಾತಾವರಣಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಅರ್ಧ ಕಿ.ಮೀ ವ್ಯಾಪ್ತಿಯಲ್ಲೇ ಶಾಲೆ ಇದೆ. ಮಕ್ಕಳು ಓಡಾಡುತ್ತಲೇ ಇರುತ್ತಾರೆ. ಸ್ವಲ್ಪ ಎಚ್ಚರತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ವಿಳಂಬ ಮಾಡದೆ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ಅರಣ್ಯಾಧಿಕಾರಿಗಳು, ಚಿರತೆ ಹಾವಳಿ ಕುರಿತು ಯಾವುದೇ ಲಿಖಿತ ದೂರು ಬಂದಿಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ ಗ್ರಾಮಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.