'ಪ್ರತಿಭೆ ಅನಾವರಣಕ್ಕೆ ಶಿಬಿರ ಸಹಕಾರಿ'
ಹೊಸಕೋಟೆ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಲು ಶಿಬಿರಗಳು ಉಪಯುಕ್ತ ಸಾಧನಗಳಾಗಿವೆ ಎಂದು ಸಾಹಿತಿ ಬಾಲಗುರುಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಕಾಟಂನಲ್ಲೂರಿನಲ್ಲಿ ಜನಪದರು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಚಿಲಿಪಿಲಿ ಚಿಣ್ಣರ ಮೇಳದ ಸಮಾರೋಪದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಪಠ್ಯಾಭ್ಯಾಸದೊಂದಿಗೆ ಕಲೆ, ಸಂಸ್ಕೃತಿ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯವಾಗಲಿದ್ದು, ಗಳಿಸಿದ ಜ್ಞಾನವನ್ನು ನಿರಂತರವಾಗಿ ಅಭ್ಯಾಸ ಮಾಡಿದಲ್ಲಿ ಮಾತ್ರ ಪ್ರಾಯೋಜಕರ, ತರಬೇತುದಾರರ ಶ್ರಮ ಸಾರ್ಥಕವಾಗಲಿದೆ ಎಂದು ಕಿವಿಮಾತು ಹೇಳಿದರು.
ನಗರೀಕರಣದ ಪ್ರಭಾವದ ಪರಿಣಾಮದಿಂದಾಗಿ ಗ್ರಾಮೀಣರ ಜೀವನ ಶೈಲಿ ಬದಲಾವಣೆಗೊಂಡು ಮಾನವೀಯ ಮೌಲ್ಯಗಳಿಗೆ ಧಕ್ಕೆಯುಂಟಾಗಿ ಸಂಸ್ಕೃತಿ ನಶಿಸುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು. ಇದೇ ವೇಳೆ ಸಂಗೀತ ನಿರ್ದೇಶಕ ಇಸ್ಮಾಯಿಲ್ ಗೋನಾಳ್, ಶಿಬಿರ ಮಾರ್ಗದರ್ಶಕ ರಾಮಕೃಷ್ಣ ಬೆಳತೂರು ಅವರನ್ನು ಸನ್ಮಾನಿಸಲಾಯಿತು.