ಬಾಲ್ಯವಿವಾಹ ಅನೂರ್ಜಿತ
ಆನೇಕಲ್ಲು: ಬೆಂಗಳೂರು ದಕ್ಷಿಣ ಹುಳಿಮಾವು ಸಿ.ಕೆ.ಪಾಳ್ಯದಲ್ಲಿ ಏ.28 ರಂದು ನಡೆದ ಬಾಲ್ಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಬನ್ನೇರುಘಟ್ಟ ಪೊಲೀಸರ ಸಹಕಾರದೊಂದಿಗೆ ತಡೆದು ವಿವಾಹವನ್ನು ಅನೂರ್ಜಿತ ಎಂದು ಘೋಷಿಸಿ ಬಾಲಕಿಯನ್ನು ಬಾಲಮಂದಿರ ವಶಕ್ಕೆ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚತ್ತೆಕೆರೆ ಪಾಳ್ಯದ ಪಿಳ್ಳಪ್ಪರವರ ಮಗಳು ಕುಮಾರಿ ರೂಪ(15) 9ನೇ ತರಗತಿ ಪರೀಕ್ಷೆ ಬರೆದಿದ್ದಳು. ಅದೇ ಊರಿನ ಜ್ಯೋತಿ ಅಲಿಯಾಸ್ ಮೋತಿ(27) ಎಂಬ ಯುವಕನೊಂದಿಗೆ ವಿವಾಹ ನಡೆದಿತ್ತು. ಸಚಿವೆ ಉಮಾಶ್ರೀ ನಿರ್ದೇಶನದಂತೆ ಸ್ಥಳಕ್ಕೆ ಧಾವಿಸಿದ ಸಿಡಿಪಿಒ ನಿಶ್ಚಲಾ ಮತ್ತು ಬನ್ನೇರುಘಟ್ಟ ಪೊಲೀಸರ ತಂಡ ಪೋಷಕರನ್ನು ಒಪ್ಪಿಸಿ ಬಾಲಕಿಗೆ 18 ವರ್ಷ ತುಂಬುವ ಮೊದಲೇ ಮದುವೆ ಮಾಡುವುದು ಕಾನೂನು ಪ್ರಕಾರ ತಪ್ಪಾಗುತ್ತದೆ. ರೂಪಾಳನ್ನು ಬೆಂಗಳೂರಿನ ಬಾಲಕಿಯರ ಬಾಲಮಂದಿರದಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ರೂಪಾಗೆ ಹರ್ಷ!
ತನ್ನ ನಿರೀಕ್ಷೆಗೂ ಮೀರಿ ಇಲಾಖಾ ಅಧಿಕಾರಿಗಳು ಬಂದು ವಿವಾಹವನ್ನು ಅನೂರ್ಜಿತಗೊಳಿಸಿದ್ದನ್ನು ರೂಪಾ ಹರ್ಷದಿಂದ ಸ್ವಾಗತಿಸಿದ್ದಾಳೆ. ನನಗೆ ಓದು ಮುಂದುವರಿಸಲು ತುಂಬ ಆಸೆಯಿತ್ತು. ಓದಿ ಶಿಕ್ಷಕಿಯಾಗಬೇಕೆಂಬ ಅದಮ್ಯ ಬಯಕೆಯಿದೆ. ಜೀವನದಲ್ಲಿ ಸಾಧಿಸಿ ತೋರುತ್ತೇನೆ. ಜೊತೆಗೆ ನನ್ನಂತೆಯೇ ಅಮಾಯಕ ಹುಡುಗಿಯರು ಒತ್ತಡಕ್ಕೆ ಮಣಿದು ಮದುವೆಯಾಗುವ ಸಂದರ್ಭ ಬಂದರೆ ಕಾನೂನಿನ ರಕ್ಷಣೆ ಪಡೆಯಲು ತಿಳಿಸುತ್ತೇನೆ ಎಂದು ತಿಳಿಸಿದ್ದಾಳೆ.