ಮೀಸಲು ಸೌಲಭ್ಯ ಅರ್ಹ ಫಲಾನುಭವಿಗೆ ಸಲ್ಲಲಿ
ನೆಲಮಂಗಲ: ಸರ್ಕಾರ ನೀಡುವ ಮೀಸಲು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಮಾತ್ರ ಬಳಸಿಕೊಳ್ಳಬೇಕೆ ಹೊರತು ಬೇರೆಯವರ ಪಾಲಾಗುವಂತೆ ಮಾಡಬೇಡಿ ಎಂದು ಸೋಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ತೀರ್ಥಪ್ರಸಾದ್ ತಿಳಿಸಿದರು.
ಅವರು ಬುಧವಾರ ತಾಲ್ಲೂಕಿನ ಸೋಂಪುರ ಗ್ರಾಮ ಪಂಚಾಯ್ತಿಯಿಂದ 2013-14ನೇ ಸಾಲಿನ ಶೇಕಡಾ 25 ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಭಾರತ್ ಗ್ಯಾಸ್ ಕನೆಕ್ಷನ್ನ ವಸ್ತುಗಳನ್ನು ವಿತರಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ವರ್ಗದ ಸಮುದಾಯದವರು ಆಧುನಿಕ ಸೌಲಭ್ಯಗಳಿಂದ ವಂಚಿತರಾಗಬಾರದು. ಅವರು ಎಲ್ಲರಂತೆ ಬಾಳಬೇಕು ಎಂಬ ದೃಷ್ಟಿಯಿಂದ ಮೀಸಲು ಅನುದಾನದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ನಿಮ್ಮಲ್ಲಿ ನಾವು ನೀಡುವ ವಸ್ತುಗಳಿದ್ದರೆ ಅಂಥಹವರು ವಸ್ತುಗಳನ್ನು ನಿರಾಕರಿಸಿ ಅವುಗಳನ್ನು ಸೌಲಭ್ಯ ವಂಚಿತರಿಗೆ ಕೊಡಿಸುವಲ್ಲಿ ಉದಾರತೆ ತೋರಬೇಕು ಎಂದರು.
ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದರೆ ಸದೃಢ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ತಾವು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಸೇರಿಸಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಎಂದರು. ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಉಚಿತ ಪಠ್ಯ ಪುಸ್ತಕ, ನೋಟ್ ಪುಸ್ತಕ,
ಬ್ಯಾಗ್, ಸಮವಸ್ತ್ರ, ಲೇಖನ ಸಾಮಗ್ರಿಗಳು, ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರವಾಸ, ಉಚಿತ ಊಟದ ವ್ಯವಸ್ಥೆಯನ್ನು ನೀಡುತ್ತಿದೆ. ಅಲ್ಲದೆ ಹಾಸ್ಟೆಲ್ ವ್ಯವಸ್ಥೆಯೂ ಇರುತ್ತದೆ. ಆಸಕ್ತರು ಹಾಸ್ಟೆಲ್ನಲ್ಲಿಯೇ ಉಳಿದುಕೊಂಡು ವ್ಯಾಸಂಗ ಮಾಡಲು ಮುಂದಾಗಬೇಕು. ನಿಮ್ಮ ನೆರೆ ಹೊರೆಯವರ ಮಕ್ಕಳು ಒಂದು ವೇಳೆ ಶಾಲೆಯಿಂದ ಹೊರಗುಳಿದಿದ್ದರೆ ಅಂಥಹ ಪ್ರಕರಣಗಳನ್ನು ತಮ್ಮ ಸಮೀಪದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ತಿಳಿಸಿ ಎಂದರು.
ನಿಮಗೆ ಒಂದು ವೇಳೆ ತೊಂದರೆಯಾದರೆ ಅವರಿಗೂ ಸಹಾಯ ನೀಡುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ಇಂದ್ರಮ್ಮ ಪರಮೇಶ್, ಸದಸ್ಯರಾದ ದೈವಕುಮಾರ್, ಜಗದೀಶ್, ಕುಮಾರ್, ಶಿವಕುಮಾರ್, ಕಾರ್ಯದರ್ಶಿ ಕೆಂಪರಂಗಯ್ಯ ಇದ್ದರು.