ಜನಸ್ಪಂದನ ಸಭೆಗೆ ಅಧಿಕಾರಿಗಳು ಗೈರು
ಮಾಗಡಿ: ಜನಸ್ಪಂದನ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಮುಂದಿನ ಜನಸ್ಪಂದನ ಸಭೆಯಲ್ಲಿ ಹಾರ ಹಾಕಿ ವಾದ್ಯ, ಮೇಳದ ಮೂಲಕ ಸಭೆಗೆ ಸ್ವಾಗತಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದರು.
ಮಾಗಡಿ ತಾಲೂಕು ಕಚೇರಿ ಸಬಾಂಗಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಭೆಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಜನರು ತಮ್ಮ ಸಮಸ್ಯೆಗಳ ಹೊತ್ತು ಜನಸ್ಪಂದನ ಸಭೆಗೆ ಬರುತ್ತಾರೆ. ಅಧಿಕಾರಿಗಳ ಗೈರು ಹಾಜರಿಯಿಂದ ಸಾರ್ವಜನಿಕ ಸಮಸ್ಯೆ ಸಭೆಯಲ್ಲಿ ಬಗೆಹರಿಸಲು ಅಸಾಧ್ಯವಾಗುತ್ತದೆ. ಅಧಿಕಾರಿಗಳ ಗೈರಿನಿಂದಾಗಿ ಕಾಟಾಚಾರಕ್ಕೆ ಜನಸ್ಪಂದನಾ ಸಭೆಯಾಗುವುದು ಬೇಡ. ಕಡ್ಡಾಯವಾಗಿ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಇಲ್ಲದಿದ್ದರೆ ತನ್ನದೇ ಆದ ರೀತಿಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೈರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸರ್ವೆ ಮತ್ತು ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಮಂಚನಬೆಲೆ ಜಲಾಶಯಕ್ಕೆ ಮುಳುಗಡೆಯಾಗಿರುವ ಭೂಮಿಯನ್ನು ಬಲಾಢ್ಯರು ಅಕ್ರಮವಾಗಿ ಉಳುಮೆ ಮಾಡುತ್ತಿದ್ದಾರೆ ಎಂದು ಮಂಚನಬೆಲೆ ಲೋಕೇಶ್ ಶಾಸಕರಲ್ಲಿ ದೂರಿದರು. ಮತ್ತೀಕೆರೆ ಗ್ರಾಮದ ರೈತನೊಬ್ಬ ತತ್ಕಾಲಿಕ ಪೋಡಿಗಾಗಿ ಅರ್ಜಿ ಸಲ್ಲಿಸಿ 8 ತಿಂಗಳು ಕಳೆದರೂ ಇಲ್ಲಿಯವರೆವಿಗೂ ಪೋಡಿ ಮಾಡಿಕೊಟ್ಟಿಲ್ಲ, ಕೊಳವೆ ಬಾವಿಗೆ ಅಕ್ರಮವಾಗಿ ಅಳವಡಿಸಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಂ ಸಿಬ್ಬಂದಿ ಕಡಿದು ಹಾಕಿದ್ದಾರೆ. ಪಡಿತರ ಚೀಟಿ ನೀಡುತ್ತಿಲ್ಲ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ವಾಜರಹಳ್ಳಿಯಲ್ಲಿ ಒಂದೇ ಮನೆಗೆ ನಾಲ್ಕು ನಿವೇಶನ ಮಂಜೂರು, ನಕಾಶೆ ದಾರಿಯಿದ್ದರೂ, ಸರ್ವೇಯರ್ ಹೊಸ ನಕಾಶೆ ದಾರಿ ಸೃಷ್ಟಿ ಮಾಡಿದ್ದಾರೆ. ರಾಜ್ಯ ವ್ಯಾಪ್ತಿಯಲ್ಲಿ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಇಲ್ಲಿನ ಬಿಇಒ ಖಾಸಗಿ ವಿದ್ಯಾಸಂಸ್ಥೆ ಮುಖ್ಯಸ್ಥರ ಹಾಗು ಪೋಷಕರ ಸಭೆ ಕರೆದು ಜಾಗೃತಿ ಸಭೆ ನಡೆಸಿಲ್ಲ ಎಂದು ನೂರಾರು ಸಮಸ್ಯೆಗಳ ಸರಮಾಲೆಯನ್ನು ಸಾರ್ವಜನಿಕರು ಜನಸ್ಪಂದನ ಸಭೆಯಲ್ಲಿ ತೆರೆದಿಟ್ಟರು.
ಈ ಸಂಬಂಧ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ಮುಂದಿನ ಜನಸ್ಪಂದನ ಸಭೆಯಲ್ಲಿ ಸದರಿ ಸಮಸ್ಯೆಗಳು ಬಗೆಹರಿದಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕು ಕಚೇರಿಯಲ್ಲಿ ಅಟಲ್ ಜನಸ್ನೇಹಿ ಯೋಜನೆಯ ಕಂಪ್ಯೂಟರ್ನ ಪ್ರಿಂಟರ್ಗಳು ಕೆಟ್ಟು ಹೋಗಿ ತಿಂಗಳು ಕಳೆದಿದೆ. ದುರಸ್ಥಿಪಡಿಸಿಲ್ಲ, ಇದರಿಂದಾಗಿ ಸಾರ್ವಜನಿಕರು ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲಾಗದ ಪರಿಸ್ಥಿತಿ ಎದುರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಈ ಸಂಬಂಧ ಶಾಸಕರು ದೂರವಾಣಿ ಮೂಲಕ ಎಡಿಸಿ ಅವರನ್ನು ಸಂಪರ್ಕಿಸಿ ಕೂಡಲೆ ಹೊಸ ಪ್ರಿಂಟರ್ ಖರೀದಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ತಾಕೀತು ಮಾಡಿದರು. ಪಶುಪಾಲ ಸಹಾಯಕ ನಿರ್ದೇಶಕ, ಸಿಡಿಪಿಒ ಹುದ್ದೆ ಖಾಲಿಯಿದ್ದು, ನಾಗರಿಕರಿಗೆ ಸೌಲತ್ತು ಲಭಿಸುತ್ತಿಲ್ಲ, ಕೂಡಲೆ ಹುದ್ದೆ ಭರ್ತಿಗೆ ಶಾಸಕರಲ್ಲಿ ನಾಗರಿಕರು ಮನವಿ ಮಾಡಿದರು. ಈ ಸಂಬಂಧ ಸರ್ಕಾರದ ಕಾರ್ಯದರ್ಶಿಯೊಂದಿಗೆ ಚರ್ಚಿಸುವುದಾಗಿ ಶಾಸಕರು ವಿವರಿಸಿದರು.
ತಾ.ಪಂ. ಅಧ್ಯಕ್ಷೆ ಅನುಸೂಯಮ್ಮ ಮರಿಗೌಡ, ಸದಸ್ಯರಾದ ಬಿ.ಟಿ. ವೆಂಕಟೇಶ್, ಕೆ.ಜಿ. ಉದ್ದೀಶ್, ಜಿ.ಕೃಷ್ಣ,ಚಕ್ರಬಾವಿ ಭೈರಪ್ಪ, ಜಿ.ಪಂ. ಸದಸ್ಯ ಮುದ್ದುರಾಜ ಯಾದವ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಲೋಕೇಶ್, ತಹಸೀಲ್ದಾರ್ ಶಿವಕುಮಾರ್, ತಾ.ಪಂ. ಇಒ ರಂಗೇಗೌಡ, ಹಾಗೂ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಹಾಜರಿದ್ದರು.