'ಮಾಧ್ಯಮಗಳು ಸಮಾಜದ ಅಂಕು-ಡೊಂಕು ತಿದ್ದಲಿ'
ನೆಲಮಂಗಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವಲ್ಲಿ ಮಾಧ್ಯಮಗಳ ಪಾತ್ರ ಬಹಳ ಪ್ರಮುಖ. ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವಲ್ಲಿ ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ನಾಗರಾಜ್ ತಿಳಿಸಿದ್ದಾರೆ.
ಪಟ್ಟಣದ ಗಾರ್ಡನ್ ಕಾಂಪ್ಲೆಕ್ಸ್ನ ಎಂ.ಎಸ್.ಕನ್ವೆನ್ಷನ್ ಹಾಲ್ನಲ್ಲಿ ನೆಲಮಂಗಲ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಹಾಗೂ ಅವರ ಹಿಂದಿನ ಆಡಳಿತಾವಧಿಯಲ್ಲಿ ಜನರು ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರನ್ನು ದೇವರೆಂದು ಕಾಣುತ್ತಿದ್ದರು. ಇಂದಿನ ಶಾಸಕರು ಜನರ ಕಣ್ಣಿಗೆ ದೆವ್ವಗಳಂತೆ ಕಾಣುತ್ತಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆಗಳಲ್ಲಿ ಉದ್ಯಮಿಗಳು, ಗುಜರಿ ವ್ಯಾಪಾರಿಗಳು ದಗಾಕೋರರೆ ಹೆಚ್ಚಾಗಿದ್ದಾರೆ. ಜನಪ್ರತಿನಿಧಿಗಳಿಂದ ಜನಸೇವೆ ಬಯಸಲಾಗುವುದಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಪತ್ರಿಕಾ ಮಾಧ್ಯಮ ಆಡಳಿತಾರೂಡ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಆಡಳಿತದಲ್ಲಿ ಕಂಡು ಬರುವ ಯಾವುದೇ ಲೋಪದೋಷಗಳನ್ನು ಸರಿಪಡಿಸಲು ಉತ್ತಮ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಪತ್ರಿಕೆಗಳು ಸಮಾಜದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಹೊನ್ನಮ್ಮ ಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಸಮಾಜದ ಶೋಷಿತರ, ನಿರ್ಲಕ್ಷಿತರ ಹಾಗೂ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಪರ್ತಕರ್ತರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಪತ್ರಕರ್ತರಾದ ವೈ.ಎಸ್.ಎಲ್.ಸ್ವಾಮಿ , ಮಂಹತೇಶ್ ಕುಮಾರ್, ನಾರಾಯಣ್, ಮಂಜುನಾಥ್, ಶಿವಕುಮಾರ್ ಹೊನ್ನೇನಹಳ್ಳಿ ಅವರಿಗೆ ಮಾಧ್ಯಮ ಸನ್ಮಾನ ಪ್ರಶಸ್ತಿಯನ್ನು ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ವಿತರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಪ್ರೆಸ್ ಕ್ಲಬ್ ಅಧ್ಯಕ್ಷ ಎನ್. ರಾಜಶೇಖರ್, ನೆಲಮಂಗಲ ಪ್ರೆಸ್ ಕ್ಲಬ್ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಪ್ರಕಾಶ್, ಉಮಾಶಂಕರ್, ಗೋಪಾಲ್ ಸೇರಿದಂತೆ ನೂರಾರು ಜನ ಇದ್ದರು.