ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಧುನೀಕರಣ ಹೆಚ್ಚಿದಂತೆಲ್ಲಾ ಅವಾಂತರಗಳೂ ಹೆಚ್ಚು

Rashmi Kasaragodu
Updated On : 6 Aug 2014, 1:25 am

ರಾಮನಗರ: ಜಾಗತೀಕರಣ, ಕೈಗಾರೀಕರಣ, ಆಧುನೀಕರಣದ ಭರಾಟೆ ಹೆಚ್ಚಿದಂತೆಲ್ಲಾ ಸಮಾಜದಲ್ಲಿ ಅವಾಂತರಗಳೂ ಕೂಡ ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎಲ್. ಚಂದ್ರಶೇಖರ್ ವಿಷಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳು ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ನೂರು ವರುಷ, ನೂರು ಸಾಹಿತಿಗಳು, ನೂರು ಕೃತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಡದ ವಿಷಯಕ್ಕೆ ಆಸಕ್ತಿ: ಇಂದಿನ ಯುವಜನತೆ ವಿದ್ಯಾರ್ಜನೆಯನ್ನು ಬಿಟ್ಟು ತಮಗೆ ಬೇಡದ ವಿಷಯಗಳ ಕಲಿಕೆಗೆ ಆಸಕ್ತಿ ತೋರುತ್ತಾರೆ. ಸಿನಿಮಾ, ದೂರದರ್ಶನ, ಇಂಟರ್ನೆಟ್, ಮೊಬೈಲ್ಗಳಿಗೆ ದಾಸರಾಗಿದ್ದಾರೆ. ಒಳ್ಳೆಯ ವಿಷಯಗಳನ್ನು ಬಿಟ್ಟು ಕೆಟ್ಟ ವಿಷಯಗಳ ಬಗ್ಗೆ ಆಲೋಚನೆ ಮಾಡುತ್ತಿರುವುದರಿಂದ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
ಕನ್ನಡ ನಾಡು, ನುಡಿ, ಸಂಸ್ಕೃತಿಯ ರಕ್ಷಣೆ ಮಾಡಬೇಕಿದ್ದ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೊಳಗಾಗಿದ್ದು, ಮಾತೃಭಾಷೆಯನ್ನು ಕಡೆಗಣಿಸಿ ಆಂಗ್ಲ ಭಾಷೆಗೆ ಮಾರು ಹೋಗಿದ್ದಾರೆ. ಇದರಿಂದಾಗಿ ಸಾವಿರಾರು ವರ್ಷಗಳಷ್ಟು ಇತಿಹಾಸವಿರುವ ಕನ್ನಡ ಭಾಷೆಯು ಕನ್ನಡ ನಾಡಿನಲ್ಲೇ ಅವನತಿಯ ಹಾದಿ ಹಿಡಿದಿದೆ ಎಂದು ಚಂದ್ರಶೇಖರ್ ತಿಳಿಸಿದರು.
ಮುಂದಾಗಲಿ: ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ಕವಿಗಳು ಹಾಗೂ ಸಾಹಿತ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದ ಅವರು ಅತ್ಯಂತ ಶ್ರೇಷ್ಠವಾಗಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಯುವಜನರು ಮುಂದಾಗಬೇಕು ಎಂದರು.   
ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆ ಮೂಲಕ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಗ್ರಾಮೀಣ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ತಮ್ಮ ಕಂಪನಿಯು ಸದಾ ಸಿದ್ಧವಿದೆ ಎಂದು ಕೋಕಾ ಕೋಲ ಕಂಪೆನಿಯ ಮಾನ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ವಿನೋದ್ ಆರ್. ಜಕಾತಿ ತಿಳಿಸಿದರು.
ಸಮಾಜದಲ್ಲಿ ದಲಿತರ ಸಂವೇದನೆ, ಶೋಷಣೆ, ಮತಾಂತರ, ಮೇಲ್ವರ್ಗದವರ ದರ್ಪ, ಭೂ ಮಾಲೀಕರು ನಡೆಸುತ್ತಿರುವ ದೌರ್ಜನ್ಯವನ್ನು ತೊಡೆದು ಹಾಕಲು ಚೋಮ ನಡೆಸುವ ವಿಫಲಯತ್ನ, ಆತನ ಆಸೆಗೆ ಸಹಕರಿಸುವ ಆತನ ಮಗಳು ಬೆಳ್ಳಿ, ಇವೆಲ್ಲವನ್ನು ಡಾ.ಶಿವರಾಮ ಕಾರಂತರು ಚೋಮನದುಡಿ ಕಾದಂಬರಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಉಪನ್ಯಾಸಕ ಸಿಪಿಲೆ ಸತೀಶ್ ವಿಶ್ಲೇಷಿಸಿದರು.
ಕನ್ನಡ ಭಾಷೆಯ ಅಳಿವು, ಉಳಿವು ಕನ್ನಡಿಗರ ಕೈಯಲ್ಲಿಯೇ ಇದೆ. ಎಷ್ಟು ಭಾಷೆಯನ್ನಾದರೂ ಕಲಿತು ಪಾಂಡಿತ್ಯ ಗಳಿಸಿರಿ. ಆದರೆ, ಕನ್ನಡವನ್ನು ಮರೆಯದೆ ಮಾತೃ ಸ್ಥಾನದಲ್ಲಿರಿಸಿ ಗೌರವಿಸಿ. ಇದರಿಂದ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಶಿಕಲಾಗೌಡ ತಿಳಿಸಿದರು.  
ಸನ್ಮಾನ: ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಶಾಲೆಯ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಪದಾಧಿಕಾರಿಗಳಾದ ಶಿವಸ್ವಾಮಿ, ಸುಮಂಗಲ ಸಿದ್ದರಾಜು, ಕೃಷ್ಣ, ಕಿರಣ್, ಚೌ.ಪು.ಸ್ವಾಮಿ, ವಿನಯ್ ಕುಮಾರ್, ಬಿ.ಟಿ.ದಿನೇಶ್, ಗಿರೀಶ್, ವೆಂಕಟೇಶ್, ರಾಜೇಶ್, ಶಿಕ್ಷಕ ಟಿಸಿಕೆ ರಾಜು ಮತ್ತಿತರರು ಭಾಗವಹಿಸಿದ್ದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement