ಕಾಯಂಗೆ ಆಗ್ರಹಿಸಿ ಕಾರ್ಮಿಕರ ಧರಣಿ
ದೊಡ್ಡಬಳ್ಳಾಪುರ: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಮಜರಾಹೊಸಹಳ್ಳಿ ಸಮೀಪ ಇರುವ ಇಂಡಸ್ ಮೆಮ್ಟೆಕ್ ಕಾರ್ಖಾನೆಯ ಕಾರ್ಮಿಕರು ಕಾರ್ಖಾನೆ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಳೆದ 4 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕಾಯಂಗೊಳಿಸಿಲ್ಲ. ಕಾರ್ಮಿಕರಿಗೆ ಕಾರ್ಖಾನೆಯಿಂದ ಯಾವುದೇ ಬಗೆಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಅಲ್ಲದೆ ಹೆಚ್ಚಿನ ಅವಧಿ ದುಡಿಸಿಕೊಳ್ಳಲಾಗುತ್ತಿದೆ. ಪಿಎಫ್ ಹಣವನ್ನು ಗುತ್ತಿಗೆದಾರರು ಬಳಸಿಕೊಂಡು ಕಾರ್ಮಿಕರಿಗೆ ವಂಚಿಸಿದ್ದಾರೆ. ಈ ಬಗ್ಗೆ ಕಾರ್ಖಾನೆಯ ಆಡಳಿತ ಮಂಡಲಿಗೆ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ. ಕಾರ್ಖಾನೆಯಲ್ಲಿ ಗುತ್ತಿಗೆದಾರರು ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಕೂಡ ದಿವ್ಯ ಮೌನ ವಹಿಸಿದೆ. ವಂಚನೆ ಮತ್ತು ಕಾನೂನು ಉಲ್ಲಂಘನೆ ಗಮನಕ್ಕೆ ಬಂದರೂ ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಈ ಬಗೆಯ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಕಾರ್ಮಿಕರನ್ನು ವ್ಯವಸ್ಥಿತವಾಗಿ ದುಡಿಸಿಕೊಳ್ಳುವ ಮಾಲೀಕರು ಅವರಿಗೆ ಪೂರಕವಾದ ಅವಕಾಶ ಮತ್ತು ಸೌಲಭ್ಯಗಳನ್ನು ನೀಡುವುದಿಲ್ಲ. ಒಂದು ವೇಳೆ ಪ್ರಶ್ನಿಸಿದರೆ ಕೆಲಸದಿಂದಲೇ ಕಿತ್ತೆಸೆದು ಹೊರ ರಾಜ್ಯದ ಅಥವಾ ದೂರ ಪ್ರದೇಶಗಳ ವಲಸಿಗರಿಗೆ ಮಣೆ ಹಾಕುತ್ತಾರೆ. ಹಕ್ಕುಗಳಿಗಾಗಿ ಹೋರಾಟ ಮಾಡುವುದನ್ನೂ ಕೆಲವು ಕಾರ್ಖಾನೆಗಳು ಅಪರಾಧ ಎಂಬಂತೆ ಪರಿಗಣಿಸುವ ಧೋರಣೆ ಅನುಸರಿಸುತ್ತಿವೆ. ಶ್ರಮಿಕವರ್ಗದ ಮೇಲೆ ನಿರಂತರ ಶೋಷಣೆ ನಡೆಯುತ್ತಿದ್ದರೂ ಈ ಬಗ್ಗೆ ಸರ್ಕಾರಿ ಇಲಾಖೆಗಳು ತುಟಿ ಬಿಚ್ಚಿಲ್ಲ. ಅಧಿಕಾರಿಗಳು ಕಾರ್ಮಿಕರ ಅಳಲು ಕೇಳಲು ಸಿದ್ಧರಿಲ್ಲ. ಹೀಗಾಗಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ ಎಂದು ಆರೋಪಿಸಿದರು. ಕನ್ನಡ ಕ್ರಾಂತಿ ದೀಪ ಸಂಘಟೆಯ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಕಾರ್ಮಿಕ ವಿಶ್ವನಾಥ್ ಮಾತನಾಡಿದರು. ಮುಖಂಡರಾದ ನರಸಿಂಹಮೂರ್ತಿ, ವಿನಾಯಕ್, ಸಂತೋಷ್, ಹರೀಶ್ ಸಂಘಟನೆಯ ಹಲವರು ಭಾಗವಹಿಸಿದ್ದರು.