ಕೊಂಬೆಗಳಿಗೆ ಕೊಡಲಿ ಪೆಟ್ಟು
ದೊಡ್ಡಬಳ್ಳಾಪುರ: ಒಣಸೌದೆ ಕಡಿದುಕೊಳ್ಳುವ ನೆಪದಲ್ಲಿ ಸುಮಾರು 40 ಸಾವಿರ ಬೆಲೆ ಬಾಳುವ ಮರದ ಕೊಂಬೆಗಳನ್ನು ಕತ್ತರಿಸಿರುವ ಪ್ರಕರಣ ತಾಲೂಕಿನ ಕೋಲಿಗೆರೆ ಗ್ರಾಮದಲ್ಲಿ ನಡೆದಿದೆ.ಅಕ್ರಮವಾಗಿ ಮರ ಕಡಿಯುವುದನ್ನು ತಡೆದ ಗ್ರಾಮಸ್ಥರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಾರದ ಹೊರತು, ಕೊಂಬೆಗಳನ್ನು ತೆರವು ಮಾಡಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಶಾಲಾ ಆವರಣದ ಆಲದ ಮರದಲ್ಲಿ ಒಣಗಿರುವ ರೆಂಬೆಗಳನ್ನು ತೆರವು ಮಾಡುವಂತೆ ಶಾಲಾ ಮುಖ್ಯಶಿಕ್ಷಕರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಪರಿಣಾಮವಾಗಿ ಮರದಲ್ಲಿ ಒಣಗಿದ್ದ ಸುಮಾರು 4 ಟನ್ ಸೌದೆಯನ್ನು ಹರಾಡು ಪ್ರಕ್ರಿಯೆ ನಡೆಸಿ ತೆರವುಗೊಳಿಸುವಂತೆ ಇಲಾಖೆ ತನ್ನ ಸಿಬ್ಬಂದಿಗೆ ಸೂಚಿಸಿತ್ತು. ಆದರೆ ಇದೇ ನೆಪದಲ್ಲಿ ಒಣಸೌದೆ ಜೊತೆಗೆ ಸುಮಾರು 40 ಟನ್ಗಳಷ್ಟು ಮರದ ಕೊಂಬೆಗಳನ್ನು ಕಡಿಯಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಅಧಿಕಾರಿಗಳ ಹಾರಿಕೆ ಉತ್ತರದಿಂದ ಕುಪಿತರಾದ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್, ಲಕ್ಷ್ಮೀನಾರಾಯಣ್, ಮಂಜುನಾಥ್ ಹಾಜರಿದ್ದರು.