ರಸ್ತೆ ಪಕ್ಕದಲ್ಲಿಯೇ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ವಿರೋಧ
ಸೂಲಿಬೆಲೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಜಮೀನಿನ ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಹೊಸ ಆಸ್ಪತ್ರೆ ಕಟ್ಟಡ ಕಟ್ಟಲು ಮುಂದಾಗಿರುವ ಅಧಿಕಾರಿಗಳ ಪ್ರಯತ್ನಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಬ್ಬ ಮಾಲಿನ್ಯ ಹೆಚ್ಚಿರುವ ರಸ್ತೆ ಪಕ್ಕದಲ್ಲಿಯೇ ಆಸ್ಪತ್ರೆ ಕಟ್ಟಿದರೆ ರೋಗ ನಿವಾರಣಿಗಿಂತ ಅನಾರೋಗ್ಯವೇ ಜಾಸ್ತಿಯಾಗುತ್ತದೆ. ಈಗಿರುವ ಕಟ್ಟಡದ ಹಿಂಬದಿಯಲ್ಲಿ ಹೊಸ ಕಟ್ಟಡ ಕಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೂಲಿಬೆಲೆ ಹೋಬಳಿ ಕೇಂದ್ರವಾಗಿದ್ದು ಅತಿ ಜನಸಂಖ್ಯೆಯನ್ನು ಹೊಂದಿದೆ. ಹೊಸಕೋಟೆ, ವಿಜಯಪುರ ರಸ್ತೆ ಪಕ್ಕದಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರದ ನಾಲ್ಕುವರೆ ಎಕರೆ ಜಮೀನಿದೆ. ಜನ ಸಂಖ್ಯೆ ಹೆಚ್ಚಿರುವ ಕಾರಣ ಬಚ್ಚೇಗೌಡರು ಸಚಿವರಾಗಿದ್ದ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ 1 ಕೋಟಿ 77 ಲಕ್ಷ ಹಣವನ್ನು ಬಿಡುಗಡೆ ಮಾಡಿಸಿದ್ದರು. ಈಗ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದು, ರಸ್ತೆ ಪಕ್ಕದಲ್ಲಿಯೇ ನಿರ್ಮಾಣಕ್ಕೆ ಅಧಿಕಾರಿಗಳ ಮಂಗಳವಾರ ಜಮೀನು ಅಳತೆ ಮಾಡುತ್ತಿದ್ದನ್ನು ಗಮನಿಸಿ ಗ್ರಾಮಸ್ಥರು, ಇಲ್ಲಿ ಹೊಸ ಆಸ್ಪತ್ರೆ ಕಟ್ಟೋದು ಬೇಡ. ಹಳೇ ಕಟ್ಟಡದ ಹಿಂದೆ ನಿರ್ಮಿಸಿದರೆ ಸೂಕ್ತ ಎಂದು ಹೇಳಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ತಾಪಂ ಅಧ್ಯಕ್ಷೆ ಮಂಜುಳಾ ಡಿ.ಟಿ ವೆಂಕಟೇಶ್, ಶಬ್ಬ ಮಾಲಿನ್ಯ ಹೆಚ್ಚಾಗಿರುವ ರಸ್ತೆ ಪಕ್ಕ ಆಸ್ಪತ್ರೆ ಬೇಡ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಎದ್ದು ಬರುವ ಧೂಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ನಾನಾ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತರಬಹುದು. ಹಿಂದೆ ಜಾಗವಿದ್ದರೂ ಮುಂದೆ ಯಾಕೆ ಕಟ್ಟಬೇಕು ಅಧಿಕಾರಿಗಳು ಮುಂದಾಲೋಚನೆ ಮಾಡಬೇಕು. ನಿಮಗೆ ಅನುಕೂಲವಾಗತ್ತೇ ಎಂತೇಳಿ ಜನಕ್ಕೆ ಯಾಕ್ರೀ ತೊಂದರೆ ಕೊಡ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಬಂದಾಗ ಗ್ರಾಮಸ್ಥರು ಅಭಿಪ್ರಾಯವನ್ನು ತಿಳಿಸಿ ಹಾಲಿ ನಕ್ಷೆಯಲ್ಲಿ ಬದಲಾವಣಿ ಮಾಡಿ ಗ್ರಾಮಸ್ಥರ ಅಭಿಪ್ರಾಯದಂತೆ ಹಳೇ ಕಟ್ಟಡದ ಹಿಂದೆ ಹೊಸ ಕಟ್ಟಡ ನಿರ್ಮಾಣಮಾಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು