ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಧೀನ ಅಧಿಕಾರಿಗಳ ವೈಫಲ್ಯದಿಂದ ಎಡವಟ್ಟು, ಅವಾಂತರ

Rashmi Kasaragodu
Updated On : 2 Feb 2014, 1:26 am

ಕ.ಪ್ರ.ವಾರ್ತೆ    ರಾಮನಗರ   ಫೆ.1
ಅಧೀನ ಅಧಿಕಾರಿಗಳ ವೈಫಲ್ಯದಿಂದ ಆಗುತ್ತಿರುವ ಎಡವಟ್ಟು, ಅವಾಂತರ ಮತ್ತು ತಂದೊಡ್ಡಿಕೊಳ್ಳುತ್ತಿರುವ ಕಳಂಕದಿಂದ ಬೇಸತ್ತಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಇದೀಗ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಖುದ್ದು ದಾಳಿಗೆ ಇಳಿದಿದ್ದಾರೆ.  
ಈಚೆಗಷ್ಟೇ ಜಿಲ್ಲೆಯ ಗಡಿಯಂಚಿನಲ್ಲಿರುವ ಶಿಂಷಾ ನದಿ ಪಾತ್ರದಲ್ಲಿನ ಅಕ್ರಮ ಮರಳುಗಾರಿಕೆಯನ್ನು ವೀಕ್ಷಿಸಿ ಚನ್ನಪಟ್ಟಣ ತಾಲೂಕು ಆಡಳಿತಕ್ಕೆ ಕೊಂಚ ಚುರುಕು ಮುಟ್ಟಿಸಿದ್ದ ವಿಶ್ವನಾಥ್, ಶನಿವಾರ ಅರ್ಕಾವತಿ ನದಿ ಪಾತ್ರದ ಮರಳು ದಂಧೆ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗಿಯಾದರು.
ಅಕ್ರಮ ಮರಳು ವಶ: ಮಂಚನಬಲೆ ಜಲಾಶಯ, ಸುಗ್ಗನಹಳ್ಳಿ, ಕಟುಮಾರನಹಳ್ಳಿ, ಚನ್ನಮಾರಗೌಡನದೊಡ್ಡಿ, ಹಾಗಲಹಳ್ಳಿ ಸಹಿತ ವಿವಿಧೆಡೆ ಅರ್ಕಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ 10ಕ್ಕೂ ಹೆಚ್ಚು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಪತ್ತೆಯಾದ ರು.10 ಲಕ್ಷ ಮೌಲ್ಯದ 1140 ಕ್ಯುಬಿಕ್ ಮೀಟರ್ ಉತ್ತಮ ಮರಳನ್ನೂ ವಶಪಡಿಸಿಕೊಳ್ಳಲಾಗಿದೆ.
ನದಿ ಪಾತ್ರದಲ್ಲಿ ಪತ್ತೆಯಾದ ಫಿಲ್ಟರ್ ಮರಳುಗಾರಿಕೆ ಘಟಕಗಳನ್ನು ನಾಶಪಡಿಸಲು ಅಧೀನ ಅಧಿಕಾರಿಗಳಿಗೆ ವಿಶ್ವನಾಥ್ ಆದೇಶಿಸಿದ್ದಾರೆ.
ಶಾಲೆಗಳಲ್ಲಿ ಕಾರ್ಯಕ್ರಮ: ರಾಮನಗರ ಜಿಲ್ಲೆಯಲ್ಲಿ ಮಿತಿ ಮೀರಿರುವ ಅಕ್ರಮ ಮರಳುಗಾರಿಕೆಯಿಂದ ಹೇರಳ ಪ್ರಾಕೃತಿಕ ಸಂಪತ್ತು ನಾಶವಾಗಿದೆ. ಒಂದು ಕಾಲಕ್ಕೆ ಸಮೃದ್ಧ ಕೃಷಿ ಪ್ರದೇಶವಾಗಿದ್ದ ಈ ನೆಲವೀಗ ಮರುಭೂಮಿಯಂತಾಗಿದ್ದು, ವಿಪತ್ತು ಎದುರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮರಳುಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡಲಾಗುವುದು.
  ಮಕ್ಕಳ ಮೂಲಕವೇ ಜನಜಾಗೃತಿ ಮುಂದುವರೆಸುವ ಪ್ರಯತ್ನಕ್ಕೂ ಮುಂದಾಗುವುದಾಗಿ ಜಿಲ್ಲಾಧಿಕಾರಿ ವಿಶ್ವನಾಥ್ ತಿಳಿಸಿದ್ದಾರೆ. ಅಕ್ರಮ ಮರಳುಗಾರಿಕೆ ವಿರುದ್ಧದ ಈ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ತಿಮ್ಮಪ್ಪ, ತೋಟಗಾರಿಕೆ ಉಪ ನಿರ್ದೇಶಕಿ ಹೇಮಾ, ತಹಸೀಲ್ದಾರ್ ಹನುಮಂತರಾಯ, ಲೋಕೋಪಯೋಗಿ ಇಲಾಖೆ ಅಧಿಕಾರಿ ವೆಂಕಟೇಶ್ ಮತ್ತಿತರರಿದ್ದರು.


ಬೆಚ್ಚಿಬಿದ್ದ ಮಾಫಿಯಾ
ಅಕ್ರಮ ಮರಳುಗಾರಿಕೆ ಸಂಬಂಧ ಒಂದೆಡೆ ಭುಗಿಲೇಳುತ್ತಿರುವ ಪರಿಸರವಾದಿಗಳ ಹೋರಾಟ, ಮತ್ತೊಂದೆಡೆ ಸರ್ಕಾರದ ಮಟ್ಟದಿಂದ ಹೆಚ್ಚಿರುವ ಒತ್ತಡವು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನಿರಂತರ ದಾಳಿಗೆ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.  ಅಧೀನ ಅಧಿಕಾರಿಗಳಿಗೂ ಅವರು ಚುರುಕು ಮುಟ್ಟಿಸಿದ್ದಾರೆ. ಖುದ್ದು ಅವರೇ ಕಾರ್ಯಾಚರಣೆ ಇಳಿದಿರುವ ಪರಿಣಾಮ ಕೆಳ ಹಂತದ ಅಧಿಕಾರಿಗಳ ಆಟಾಟೋಪಕ್ಕೂ ಕಡಿವಾಣ ಬಿದ್ದಂತಾಗಿದೆ. ಸಹಜವಾಗಿಯೇ ಮರಳು ಮಾಫಿಯಾ ಕೂಡ ಬೆಚ್ಚಿ ಬಿದ್ದಿದೆ.


ದಂಧೆಕೋರರು ಪರಾರಿ
ಖುದ್ದು ಜಿಲ್ಲಾಧಿಕಾರಿಯೇ ಅಕ್ರಮ ಮರಳುಗಾರಿಕೆ ವಿರುದ್ಧದ ಕಾರ್ಯಾಚರಣೆಗೆ ಇಳಿಯುವ ಮಾಹಿತಿ ಅದು ಹೇಗೆ ಕಿವಿಗೆ ಬಿದ್ದಿತೋ ಗೊತ್ತಿಲ್ಲ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ದಂಧೆಕೋರರು ಮತ್ತು ಸಿಬ್ಬಂದಿ ನದಿ ಪಾತ್ರದಿಂದ ಪರಾರಿಯಾಗಿದ್ದರು.  ಭೇಟಿ ನೀಡಿದ ಸ್ಥಳದುದ್ದಕ್ಕೂ ಅಕ್ರಮ ಮರಳುಗಾರಿಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ  ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವನಾಥ್ ಅವರು ಮುಂದಾಗಿದ್ದು ಮಾತ್ರ ವಿಶೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement