ಕಬ್ಬಾಳು ಗ್ರಾಪಂ ನೂತನ ಅಧ್ಯಕ್ಷ ಪುಟ್ಟರಾಜು
ಕನಕಪುರ: ಕನಕಪುರ ತಾಲೂಕು ಕಬ್ಬಾಳು ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗುರುವಿನಪುರ ಪುಟ್ಟರಾಜು, ಉಪಾಧ್ಯಕ್ಷೆಯಾಗಿ ಕಾಳಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ರಾಜಿನಾಮೆಯಿಂದ ತೆರವಾಗಿದ್ದ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಗಳಿಗೆ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಗಳಾಗಿ ರೇಷ್ಮೆ ವಿಸ್ತರಣಾಧಿಕಾರಿ ಶಶಿಧರ್ ಹಾಗೂ ಪಿಡಿಓ ಬಸವರಾಜು ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರಾದ ಹೊನ್ನಿಗನಹಳ್ಳಿ ಶ್ರೀಕಂಠು ಅಭಿನಂದಿಸಿ ಮಾತನಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾನ ಸ್ಥಾನಗಳನ್ನು ಹೊಂದಿರುವ ಕಬ್ಬಾಳು ಗ್ರಾಪಂನಲ್ಲಿ ಹೊಂದಾಣಿಕೆ ಮೂಲಕ ಅಧಿಕಾರ ಹಂಚಿಕೊಂಡಿದ್ದು ಪ್ರಥಮ ಅವಧಿಗೆ ಜೆಡಿಎಸ್ಗೆ ಬಿಟ್ಟುಕೊಡಲಾಗಿತ್ತು. ಒಪ್ಪಂದದಂತೆ ಜೆಡಿಎಸ್ ಮಾರೇಗೌಡರು ರಾಜಿನಾಮೆ ನೀಡಿ ಸುಲಲಿತ ಆಯ್ಕೆಗೆ ಸಹಕರಿಸಿದ್ದಾರೆ.
ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯದೇವ್, ಮುಖಂಡರಾದ ಶಂಕರ್, ಪುಟ್ಟಮಾದು, ಮಾರೇಗೌಡ ಪಾಲ್ಗೊಂಡಿದ್ದರು.