ಸಂಘಟಿತರಾಗಲು ಕುಂಚಿಟಿಗರಿಗೆ ಸಲಹೆ
ರಾಮನಗರ : ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕುಂಚಿಟಿಗ ಸಮುದಾಯಕ್ಕೆ ಸರ್ಕಾರ ಮೀಸಲು ನೀಡಲು ಮೀನಾಮೇಷ ಎಣಿಸುತ್ತಿದೆ. ಈ ವಿರುದ್ಧ ಸಮುದಾಯ ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು ಎಂದು ಸುಕ್ಷೇತ್ರ ಕುಂಚಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಕೊಡಿಯಾಲ ಕರೇನಹಳ್ಳಿಯಲ್ಲಿ ಕುಂಚಿಟಿಗ ಸಮುದಾಯದಿಂದ ಮುದ್ರಿಸಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈಚೆಗೆ ನಡೆದ ಜಾತಿ ಗಣತಿಯಲ್ಲಿ ಕುಂಚಿಟಿಗ ಜಾತಿಯನ್ನು ಗುರುತಿಸಿಲ್ಲ. ಅಧಿಕಾರ ನಡೆಸುವ ಜನ ನಮ್ಮನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರಷ್ಟೇ ಎಂದು ಟೀಕಿಸಿದರು.
ನರಸಿಂಹಗಿರಿ ಕ್ಷೇತ್ರದ ಶ್ರೀ ಹನುಮಂತ ಸ್ವಾಮೀಜಿ ಮಾತನಾಡಿ ಸರ್ಕಾರ ಕುಂಚಿಟಿಗ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು. ಉಭಯ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ರಂಗಪ್ಪ, ಚಿಕ್ಕಮಾರಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.