13 ರಂದು ವಿಶ್ವ ರೈತ ಚೇತನ ಪ್ರೊ. ನಂಜುಂಡಸ್ವಾಮಿ ಜಯಂತಿ
ಚನ್ನಪಟ್ಟಣ: ಚಾಮರಾಜನಗರ ಜಿಲ್ಲೆ ಹೊಂಡರಬಾಳು ಗ್ರಾಮದ ಸಮೀಪದಲ್ಲಿರುವ ಅಮಣತಭೂಮಿಯಲ್ಲಿ ಫೆ.13 ರಂದು ವಿಶ್ವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 78ನೇ ಜಯಂತಿ ಹಾಗೂ 10ನೇ ಗೌರವ ಸ್ಮರಣೆ ಚಾಲನಾ ನಡೆಯಲಿದೆ. ನಂಜುಡಸ್ವಾಮಿ ಅವರ 78ನೇ ಜಯಂತಿ ಅಂಗವಾಗಿ, ಅಮೃತಭೂಮಿ ಸುಸ್ಥಿರ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ದೇಸಿ ಬಿತ್ತನೆ ಬೀಜದ ವೈವಿಧ್ಯತೆಯ ಪ್ರದರ್ಶನ, ಎಂಡಿಎನ್ ಅವರ ಹೆಸರಿನಲ್ಲಿ ಅಂತರಾಷ್ಟ್ರೀಯ ಸ್ಮರಕ ಪ್ರಶಸ್ತಿ ವಿತರಣೆ, ವಿಚಾರ ಸಂಕಿರಣ ನಡೆಯಲಿದ್ದು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಜಿಲ್ಲಾಧ್ಯಕ್ಷ ಕೆ. ಮಲ್ಲಯ್ಯ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಸಂಘಟನಾ ಸಭೆಯಲ್ಲಿ ಮನವಿ ಮಾಡಿದ್ದಾರೆ.
ಕನಕಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ರಚನಾ ಸಭೆ
ಕನಕಪುರ: ಹಾರೋಹಳ್ಳಿಯಲ್ಲಿ ಮಾ. 13 ಮತ್ತು 14 ರಂದು ನಡೆಯಲಿರುವ ಕನಕಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ರಚನಾ ಸಭೆ ತಾಲೂಕು ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ ಸಭಾಂಗಣದಲ್ಲಿ ನಡೆಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಪ್ಪ ಮಾತನಾಡಿ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಸುಮಾರು 12 ಲಕ್ಷ ರು. ವೆಚ್ಚವನ್ನು ಅಂದಾಜು ಮಾಡಲಾಗಿದ್ದು, ದಾನಿಗಳಿಂದ ಹಣಕಾಸಿನ ಹಾಗೂ ವಸ್ತುರೂಪದ ನೆರವನ್ನು ಕೋರಲು ತೀರ್ಮಾನಿಸಲಾಗಿದೆ. ಪ್ರತೀ ಶುಕ್ರವಾರ ಎಲ್ಲರೂ ಸಭೆಸೇರಿ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ ಎಂದು ಮಲ್ಲಪ್ಪ ಸಮಿತಿಗಳ ವಿವರ ನೀಡಿದರು.
ಪೂರ್ವಸಿದ್ಧತಾ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ವೆಂಕಟರಾಜು, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ತಾಪಂ ಸದಸ್ಯ ಪುರುಷೋತ್ತಮ್, ಶ್ರೀನಿವಾಸ್, ಪರಮಶಿವಯ್ಯ, ಮುರಳೀಧರ್, ಗಬ್ಬಾಡಿದೇವರಾಜು ಪಾಲ್ಗೊಂಡಿದ್ದರು.