ಎತ್ತಿನ ಹೊಳೆ ಜಿಲ್ಲಾ ಉಸ್ತುವಾರಿ ಸಚಿವರ ನಾಟಕ
ರಾಮನಗರ: ಎತ್ತಿನ ಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ತರುವ ವಿಷಯವಾಗಿ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಎತ್ತಿನಹೊಳೆ, ಕಾವೇರಿ, ಶಿಂಷಾ ಹೀಗೆ ಹಲವಾರು ನದಿಗಳಿಂದ ಜಿಲ್ಲೆಗೆ ನೀರು ತರುತ್ತೇವೆ ಎಂದು ಜನರನ್ನು ಮರಳು ಮಾಡುತ್ತಿರುವ ಕಾಂಗ್ರೆಸ್ ನಾಯಕರು ಕಳ್ಳಾಟ-ಸುಳ್ಳಾಟ ಆಡುತ್ತಿದ್ದಾರೆ. ಇದರ ಹಿಂದೆ ಕೇವಲ ದುಡ್ಡು ಹೊಡೆಯುವ ಕುತಂತ್ರ ಅಡಗಿದೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾಗಡಿಗೆ ಹೇಮಾವತಿ ನೀರು ತಂದೆ ಬಿಟ್ಟೇ ಎಂದು ಅಲ್ಲಿನ ಮುಖಂಡರೊಬ್ಬರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹೇಮಾವತಿಯ ನೀರು ತುಮಕೂರಿಗೆ ಇನ್ನೂ ಸಿಕ್ಕಿಲ್ಲ. ನೀರಿಗಾಗಿ ಅಲ್ಲಿನ ಜನ ಹೊಡೆದಾಡುತ್ತಿದ್ದಾರೆ. ಮಾಗಡಿಗೆ ಹೇಮಾವತಿ ನೀರು ತಂದರೆ ಸಂತೋಷ. ಆದರೆ, ಜನರನ್ನು ದಾರಿ ತಪ್ಪಿಸುವುದು ಬೇಡ ಎಂದರು.
ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲು ಪ್ರದೇಶದ ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಶಾಶ್ವತ ನೀರಾವರಿ ಕಲ್ಪಿಸುವ ಯೋಜನೆಗೆ ಚಿಂತಿಸಬೇಕಾಗಿದೆ. ವಾಸ್ತವವನ್ನು ಮರೆಮಾಚಿ ಐದು ವರ್ಷದ ಹೊಟ್ಟೆಪಾಡಿಗೆ ಜನರ ಮುಂದೆ ಗಿಮಿಕ್ ಮಾಡಲು ಸಂಸದರು, ಸಚಿವರು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಂಬುವುದಿಲ್ಲ: ನಾವು ಕೊರೆಸಿರುವ ಕೊಳವೆಬಾವಿಗಳಿಗೆ ಸರ್ಕಾರದ ಹಣದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿ, ಮಹಾನ್ ಸಾಧನೆ ಮಾಡಿದ್ದೇವೆ ಎಂದು ಬಿಂಬಿಸುವ ಮೂಲಕ ಡಿಕೆಶಿ ಸಹೋದರರು ಕೀಳು ಮಟ್ಟದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದನ್ನು ಜಿಲ್ಲೆಯ ಜನತೆ ನಂಬುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವವರು ಎಂದರು.
ರಾಮನಗರ-ಚನ್ನಪಟ್ಟಣ ನಗರಗಳಿಗೆ 18ರಿಂದ 26 ಎಂಎಲ್ಡಿಗೆ ಕುಡಿಯುವ ನೀರು ತರಲು ಕಳೆದ ವರ್ಷ ಆಗಸ್ಟ್ನಲ್ಲಿ ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದೆ. ಆ ಕಾರ್ಯ ಈಗ ಪ್ರಗತಿಯಲ್ಲಿದ್ದು, ಎಲ್ಲೋ ಕಲ್ಲು ಹೊಡೆದುಕೊಂಡು ಇದ್ದವರು ಇದನ್ನು ನಾನೇ ಮಾಡಿಸಿದ್ದು ಎಂದು ಜನರ ಮುಂದೆ ಪೋಸ್ ಕೊಡುತ್ತಿದ್ದಾರೆ. ಇದು ಕೇವಲ ಚುನಾವಣೆಯ ಗಿಮಿಕ್ ಹೊರತು ಬೇರೇನೂ ಅಲ್ಲ ಎಂದು ಸಂಸದ ಸುರೇಶ್ ವಿರುದ್ಧ ಕಿಡಿಕಾರಿದರು.
ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ ರಾಸುಗಳಿಗೆ ಪರಿಹಾರದ ವಿಷಯದಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳಲು ಬಂದಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ದಾಸರ ಆಶ್ರಮ, ಆರ್ಯ ಶಾಲೆ, ಸರ್ಕಾರಿ ಶಾಲೆ, ಎಲ್ಲವೂ ಇವರದ್ದೆ. ಎಲ್ಲವನ್ನೂ ಇವರಿಗೆ ದೇವರು ಬಳುವಳಿಯಾಗಿ ಕೊಟ್ಟು ಬಿಟ್ಟಿದ್ದಾನೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಡಿ.ಕೆ.ಸುರೇಶ್ ಅವರು ಸಂಸದರಾದ ನಂತರ ಕೇಂದ್ರದಿಂದ ಯಾವ ಯೋಜನೆಗೆ ಎಷ್ಟು ಹಣ ತಂದಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದನ್ನು ಅವರೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಅವರು, ಹಾರೋಹಳ್ಳಿಯಲ್ಲಿ ಡೆಂಘೀ ಜ್ವರಕ್ಕೆ ಬಲಿಯಾದವರ ಕುಟುಂಬಕ್ಕೆ ಸರ್ಕಾರ ಘೋಷಣೆ ಮಾಡಿದ ಹಣ ಇದುವರೆಗೆ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಅಲ್ಲಿ ಬಂದು ಫೋಟೋ ತೆಗೆಸಿಕೊಂಡು ಹೋಗಿದ್ದಷ್ಟೇ ಬಂತು ಭಾಗ್ಯ ಎಂದು ಸಂಸದರ ಕಾರ್ಯವೈಖರಿಯ ಬಗ್ಗೆ ವ್ಯಂಗ್ಯವಾಡಿದರು.
ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲಾ ಲೋಕಸಭಾ ಕ್ಷೇತ್ರಗಳ ಪಟ್ಟಿ ಅಂತಿಮಗೊಂಡಿದ್ದು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು. ಬೆಂ.ಗ್ರಾ. ಕ್ಷೇತ್ರಕ್ಕೆ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ನಾನು ನಿಲ್ಲುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.