ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಳು ಮಾಫಿಯಾಗೆ ರಹದಾರಿ

Rashmi Kasaragodu
Updated On : 3 Feb 2014, 1:08 am

 ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ    ರಾಮನಗರ    ಫೆ.2
ಏತ ನೀರಾವರಿಯ ಪಂಪ್ ಹೌಸ್ಗೆ ಸರಾಗವಾಗಿ ನೀರು ಹರಿಸಲೆಂದು ಶಿಂಷಾ ನದಿ ಪಾತ್ರದಲ್ಲಿ ಹೂಳು
ಮತ್ತು ಮರಳು ಎತ್ತಲು ಒಂದೂ ಮುಕ್ಕಾಲು ವರ್ಷದ ಹಿಂದೆಯೇ ಜಿಲ್ಲಾಡಳಿತ ಆದೇಶ ಹೊರಡಿಸಿ, ಮರಳು ಮಾಫಿಯಾಕ್ಕೆ ರಹದಾರಿ ಮಾಡಿಕೊಟ್ಟಿರುವ ಮಾಹಿತಿ ಬಯಲಾಗಿದೆ.
ಶಿಂಷಾ ನದಿ ಪಾತ್ರದಲ್ಲಿ ಮರಳುಗಾರಿಕೆಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೊರಡಿಸಿ ಹನ್ನೆರಡು ವರ್ಷ ಕಳೆದಿದೆ. ಆದರೆ, 2012ರಲ್ಲಿ ಏತ ನೀರಾವರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಮರಳು ಲೂಟಿಗೆ ಅವಕಾಶ ಕಲ್ಪಿಸಿ, ಜಿಲ್ಲಾಡಳಿತವೇ ನಿಷೇಧಾಜ್ಞೆ ಉಲ್ಲಂಘಿಸಿದೆ.
ಹೂಳು ಜತೆಗೆ ಎತ್ತಲ್ಪಟ್ಟ ಮರಳನ್ನು ಕಾವೇರಿ ನೀರಾವರಿ ನಿಗಮ, ಇಲ್ಲವೇ ಸಾರ್ವಜನಿಕ ಕಾಮಗಾರಿಗಳೇ ಬಳಸಬೇಕು. ಗುತ್ತಿಗೆದಾರರಿಂದ ರಾಜಧನ ಸಂಗ್ರಹಿಸಬೇಕೆನ್ನುವ ಷರತ್ತನ್ನು ಆದೇಶದಲ್ಲಿ ವಿಧಿಸಿದೆಯಾದರೂ ಸಂಗ್ರಹವಾದ ಮರಳು, ವಸೂಲಾದ ರಾಜಧನದ ಯಾವ ಮಾಹಿತಿಯೂ ಅಧಿಕಾರಿಗಳ ಬಳಿ ಇಲ್ಲ.
ಹೂಳೆತ್ತಿಸುವ ಹೆಸರಿನಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ಮರಳು ಲೂಟಿಯ ಈ ಹಗರಣದಲ್ಲಿ ರಾಮನಗರ ಜಿಲ್ಲಾಡಳಿತ ಮತ್ತು ಚನ್ನಪಟ್ಟಣ ತಾಲೂಕು ಆಡಳಿತ, ಕಾವೇರಿ ನೀರಾವರಿ ನಿಗಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಪಾಲುದಾರಿಕೆ ಇರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.
ಪ್ರಸ್ತಾವನೆಗೆ ಅಂಕಿತ: ಇಗ್ಗಲೂರು ಜಲಾಶಯದಿಂದ ಏತ ನೀರಾವರಿ ಯೋಜನೆಗಳ ಪಂಪ್ಹೌಸ್ಗೆ ನೀರು ಸರಾಗವಾಗಿ ಹರಿಸುವ ಉದ್ದೇಶದಿಂದ ಹೂಳು ಮತ್ತು ಮರಳು ಎತ್ತುವುದು ಅಗತ್ಯ ಎನ್ನುವ ಪ್ರಸ್ತಾವನೆಯೊಂದು ಕಾವೇರಿ ನೀರಾವರಿ ನಿಗಮದಿಂದ ಸಲ್ಲಿಕೆಯಾಗಿದ್ದೇ ತಡ. ಜಿಲ್ಲಾಡಳಿತ ತರಾತುರಿಯಿಂದಲೇ ಅದಕ್ಕೆ ಅನುಮತಿ ನೀಡಿದೆ.
ಖುದ್ದು ಸ್ಥಳ ಪರಿಶೀಲನೆ ನಡೆಸುವ ಮೂಲಕ ಹೂಳು ಮತ್ತು ಮರಳು ತೆಗೆಯುವುದು ಅಗತ್ಯ ಎನ್ನುವ ಅಂಶವನ್ನು ಆಗಿನ ಉಪ ವಿಭಾಗಾಧಿಕಾರಿ 2012ರ ಜ.14ರಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಶಿಫಾರಸಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಇದು ತಾಂತ್ರಿಕ ಅಭಿಪ್ರಾಯವಲ್ಲ ಎನ್ನುವ ಸಾಲನ್ನೂ ಅದರಲ್ಲಿ ಸೇರಿಸಿದ್ದಾರೆ.
ಗಣಿ ಇಲಾಖೆ ಸಮ್ಮತಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಿಂದಲೂ ಪ್ರಸ್ತಾವನೆಗೆ ಸಮ್ಮತಿ ದೊರೆತಿದೆ. ಈ ಕಚೇರಿಯಿಂದ 2012ರ ಜ.24ರಂದು ಜಿಲ್ಲಾಡಳಿತಕ್ಕೆ ಪತ್ರ ರವಾನೆ ಆಗಿದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಟ್ಟಿಗೆ ಖುದ್ದು ಸ್ಥಳ ಪರಿಶೀಲನೆಯಿಂದ ಕಾಮಗಾರಿ ಅಗತ್ಯವೆಂದು ಅವರು ಪ್ರತಿಪಾದಿಸಿದ್ದಾರೆ.
ಪರಿಶೀಲನೆ ವೇಳೆ ನದಿ ಪಾತ್ರದಲ್ಲಿ ಪೂರ್ಣ ಮಟ್ಟದ ನೀರಿತ್ತೆಂದು ಪತ್ರದಲ್ಲಿ ಕಾಣಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಸಂಪರ್ಕ ನಾಲೆಯಿಂದ 200 ಮೀ. ಸುತ್ತಳೆಯಲ್ಲಿ 1.60 ಲಕ್ಷ ಘನ ಮೀಟರ್ ಮರಳು ಮತ್ತು ಹೂಳು ಶೇಖರಣೆ ಆಗಿರುವುದನ್ನು ಅಂದಾಜಿಸಿರುವುದು ವಿಪರ್ಯಾಸದ ಸಂಗತಿ.
ಷರತ್ತು ಬದ್ಧ ಅನುಮತಿ: ಉಪ ವಿಭಾಗಾಧಿಕಾರಿ ಪತ್ರ ಸಂಖ್ಯೆ ಬಿಎಂಎಜಿಸಿಆರ್ 57-11-12, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಪತ್ರ ಸಂಖ್ಯೆ ಗಭೂಇ-ಉನಿರಾ-ಮರಳು-9007-11-12 ಮೇರೆಗೆ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ 2012ರ ಮಾ.27ರಂದು ಷರತ್ತು ಬದ್ಧವಾದ ಆದೇಶ ಹೊರಡಿಸಿದ್ದಾರೆ. ಸಂಖ್ಯೆ ರಾಜಿಕ-ಎಂಎಸ್-ಸಿ-ಕ್ಯೂಎಲ್-ಸಿಆರ್-179-11-12ರ ಸದರಿ ಆದೇಶದಲ್ಲಿ ಇಗ್ಗಲೂರು
ಬ್ಯಾರೇಜ್ ಹಿನ್ನೀರಿನ ಶಿಂಷಾ ನದಿಯಲ್ಲಿ ಹೂಳು ಮತ್ತು ಮರಳು ತೆಗೆಯಬಹುದು. ಆದರೆ, ತೆಗೆಯಲಾದ ಮರಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸುವ ಕಾಮಗಾರಿಗಳಿಗೇ ಉಪಯೋಗಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಸದರಿ ಮರಳಿಗೆ ರಾಜಧನವನ್ನು ವಸೂಲು ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜಮೆ ಮಾಡಬೇಕೆಂಬ ಷರತ್ತನ್ನು ಆದೇಶದಲ್ಲಿ ವಿಧಿಸಲಾಗಿತ್ತು. ಅಂತೆಯೇ ಪ್ರತಿ ಮೆಟ್ರಿಕ್ ಟನ್ ಮತ್ತು ಕ್ಯೂಬಿಕ್ ಮೀಟರ್ ಪ್ರಕಾರ ರಾಜಧನವನ್ನು ನಿಗದಿಪಡಿಸಿದ ಸುತ್ತೋಲೆಯನ್ನು ಕಾವೇರಿ ನೀರಾವರಿ ನಿಗಮಕ್ಕೆ ರವಾನಿಸಲಾಗಿತ್ತು.
ನಿಶಸ್ತ್ರಧಾರಿ ಆದ ಸೈನಿಕ: ಅಷ್ಟರಲ್ಲಾಗಲೇ ಕಣ್ವ ಮತ್ತು ಶಿಂಷಾ ನದಿ ಪಾತ್ರದಲ್ಲಿನ ಅಕ್ರಮ ಮರಳುಗಾರಿಕೆ ವಿರುದ್ಧ ಶಾಸಕ ಸಿ.ಪಿ. ಯೋಗೇಶ್ವರ್ ಹೋರಾಟ ನಡೆಸುತ್ತಿದ್ದರು. ಆದರೆ, ಶಿಂಷಾದಿಂದ ಏತ ನೀರಾವರಿ ಪಂಪ್ ಹೌಸ್ಗೆ ನೀರು ಸರಾಗವಾಗಿ ಹರಿಸಲು ಹೂಳು ಮತ್ತು ಮರಳೆತ್ತುವ ಕಾಮಗಾರಿಯನ್ನು ಯೋಗೇಶ್ವರ್ ಭಂಟನಿಗೇ ವಹಿಸುವ ಮೂಲಕ ಅಧಿಕಾರಿಗಳು ಸೈನಿಕನನ್ನು ನಿಶಸ್ತ್ರಧಾರಿಯನ್ನಾಗಿಸಿದರು.
ಯೋಗೇಶ್ವರ್ ಭಂಟ ಅಷ್ಟರಲ್ಲಾಗಲೇ ಸಾವಂದಿಪುರ ಮತ್ತಿತರ ಕಡೆ ಮರಳುಗಾರಿಕೆಯಲ್ಲಿ ತೊಡಗಿದ್ದನು. ಈ ಕೆಲಸವನ್ನು ಮರಳು ತೆಗೆಯುವುದರಲ್ಲಿ ನಿಪುಣನಾದವನಿಗೇ ವಹಿಸುವುದು ಸೂಕ್ತವೆಂದು ತೀರ್ಮಾನಿಸಿ ಅಧಿಕಾರಿಗಳು ಆತನ ಕೈಗೆ ಕಾಮಗಾರಿ ಆದೇಶ, ಕರಾರು ಪತ್ರವನ್ನಿಟ್ಟರು. ಅದನ್ನಿಡಿದು ಗುತ್ತಿಗೆದಾರ ಶಿಂಷಾ ಒಡಲನ್ನು ತಿಂಗಳಿಡೀ ಬಗೆದು, ಭಾರಿ ಪ್ರಮಾಣದ ಮರಳು ಹೊರ ತೆಗೆದನು.
ಮುಂದುವರೆದ ಕಾಮಗಾರಿ: ಭಾರಿ ಪ್ರಮಾಣದ ಮರಳನ್ನು ಗರಕಹಳ್ಳಿ, ಇಗ್ಗಲೂರು ಸಹಿತ ನಾನಾ ಕಡೆ ಶೇಖರಿಸಿದ್ದನು. ಆ ವರ್ಷ ಮಾರ್ಚ್ ಮಾಹೆಯಲ್ಲಿ ಪ್ರಾರಂಭಿಸಿದ ಹೂಳು ಮತ್ತು ಮರಳೆತ್ತುವ ಕಾಮಗಾರಿ ಜುಲೈವರೆಗೂ ಮುಗಿಯಲೇ ಇಲ್ಲ. ಪ್ರಶ್ನಿಸಿದವರಿಗೆ ಜಿಲ್ಲಾಡಳಿತದ ಆದೇಶ ಪ್ರತಿ ತೋರಿಸಿ, ಬಾಯಿ ಮುಚ್ಚಿಸಲಾಗುತ್ತಿತ್ತು. ಪಾಲು ಪಕ್ಕಾ ಆಗಿದ್ದರಿಂದ ಅಧಿಕಾರಿಗಳೂ ತುಟಿ ಪಿಟಿಕ್ ಎನ್ನಲಿಲ್ಲ. ಅದೇನು ಮಂಕು ಬಡಿದಿತ್ತೋ ಅಥವಾ ಭಂಟನ ಮೇಲಿನ ವ್ಯಾಮೋಹವೋ ಯೋಗೇಶ್ವರ್ ಕೂಡ ತೆಪ್ಪಗಿದ್ದರು. ಬಹುಪಾಲು ಲಾಭ ಗುತ್ತಿಗೆದಾರನ ಕಿಸಿಗೆ ಇಳಿದರೆ, ಅಲ್ಪ ಹಣಕ್ಕೆ ಅಧಿಕಾರಿಗಳು ತೃಪ್ತರಾದರು. ಷರತ್ತನ್ನು ಉಲ್ಲಂಘಿಸಿ ತೆಗೆದ ಮರಳನ್ನೆಲ್ಲ ಗುತ್ತಿಗೆದಾರ ಮರಾಟ ಮಾಡಿಕೊಂಡನು. ಅಲ್ಲೇ ನಡೆಯುತ್ತಿದ್ದ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗೆ ಅಧಿಕಾರಿಗಳು ಸರಗೂರಿನಿಂದ ಮರಳು ಸರಬರಾಜು ಮಾಡಿಕೊಂಡರು. ಈ ಕಾಮಗಾರಿ ಮೂಲಕ ಇಗ್ಗಲೂರು ಬಳಿ ಅಕ್ರಮ ಮರಳು ಮಾಫಿಯಾ ತಲೆ ಎತ್ತಲು ಜಿಲ್ಲಾಡಳಿತವೇ ನೇರ ಕಾರಣ.



ರಾಜಧನ ಬರಲೇ ಇಲ್ಲ
ಇಗ್ಗಲೂರು ಜಲಾಶಯ ಸಮೀಪ ಶಿಂಷಾ ನದಿ ಪಾತ್ರದಲ್ಲಿ ಹೂಳು ಮತ್ತು ಮರಳು ಎತ್ತುವುದಕ್ಕೆ ಅನುಮತಿ ನೀಡುವುದು ಸೂಕ್ತವೆಂದು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿರುವುದು ನಿಜ. ಆದರೆ, ಶಿಂಷಾ ನದಿಯಲ್ಲಿ ಎತ್ತಲ್ಪಟ್ಟ ಮರಳಿನಿಂದ ಬಿಡಿಗಾಸು ರಾಜಧನವೂ ನಮ್ಮ ಇಲಾಖೆಗೆ ಸಂದಾಯವಾಗಿಲ್ಲ.
ಟಿ  ತಿಮ್ಮಪ್ಪ, ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement