ಅರಣ್ಯ ಭೂಮಿಗೆ ಬೇಲಿ; ಸಿಬ್ಬಂದಿ ಮೇಲೆ ಹಲ್ಲೆ ಯತ್ನ
ಬೆಂಗಳೂರು/ಆನೇಕಲ್ಲು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಗೊಟ್ಟಿಗೆರೆ ಅರಣ್ಯ ವಲಯದ ವೀವರ್ಸ್ ಕಾಲೋನಿ ಬಳಿ ಅರಣ್ಯ ಭೂಮಿಗೆ ಬೇಲಿ ಹಾಕುತ್ತಿದ್ದ ಸಮಯದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಹೈಕೋರ್ಟ್ ಸೂಚನೆ ಮೇರೆಗೆ ಬೇಲಿ ಹಾಕಿಸುತ್ತಿದ್ದಾಗ ಗ್ರಾಮಾಂತರ ಜಿಲ್ಲಾ ಪಂಚಾಯತಿ ಸದಸ್ಯ ಜಯರಾಂ ಎಂಬುವರ ನೇತೃತ್ವದಲ್ಲಿ ಬಂದ ಕೆಲವರು ಅದಕ್ಕೆ ಅಡ್ಡಿಪಡಿಸಿದ್ದಲ್ಲದೇ ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ಆರೋಪಿಸಿದ್ದಾರೆ. ಒತ್ತುವರಿ ತೆರವು ಆದ ಅರಣ್ಯ ಭೂಮಿಗೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು ಇಲಾಖೆ ವತಿಯಿಂದ ಸೋಮವಾರ ಬೇಲಿ ಹಾಕಿಸುತ್ತಿದ್ದರು. ಅದೇ ವೇಳೆ ಜಯರಾಂ ಸೇರಿದಂತೆ ಹಲವರು ಸ್ಥಳಕ್ಕಾಗಮಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಬೇಲಿ ನಿರ್ಮಿಸಲು ಹಾಕಿದ್ದ ಫೌಂಡೇಷನ್ ಹಾನಿಗೊಳಿಸಿದ್ದಾರೆ. ಅಲ್ಲದೆ ಕಾರ್ಯನಿರತ ಅರಣ್ಯ ರಕ್ಷಕ ಲಕ್ಷ್ಮೀಕಾಂತ್ ಎಂಬುವರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಭೂಮಿ ತೆರವಿಗೆ ಅಥವಾ ಬೇಲಿ ಹಾಕಲು ಗ್ರಾಮಸ್ಥರು ಅಡ್ಡಿಪಡಿಸಲಿಲ್ಲ. ಬೇಲಿ ಹಾಕುತ್ತಿರುವ ಜಮೀನು ಮೂಲಕ ಪಕ್ಕದ ಹಳ್ಳಿಗೆ ತೆರಳಲು ಸಮೀಪದ ದಾರಿಯಿದೆ. ಈ ದಾರಿ ಬಿಟ್ಟರೇ 4 ಕಿ.ಮೀ. ಮಾರ್ಗ ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ. 50 ಅಡಿ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಿ ಎಂದು ಕೇಳಿದೆವು. ಈ ಹಂತದಲ್ಲಿ ಲಕ್ಷ್ಮೀಕಾಂತ ಎಂಬ ಸಿಬ್ಬಂದಿ ತನ್ನ ಮೊಬೈಲ್ ಮೂಲಕ ಚಿತ್ರೀಕರಣ ನಡೆಸಿದ. ಆದನ್ನು ತೆಗೆದು ಹಾಕಲು ತಿಳಿಸಿದಾಗ ಮಾತಿನ ಚಕಮಕಿ ಆಗಿದೆ. ಯಾವುದೇ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿಲ್ಲ ಎಂದು ಸ್ಥಳೀಯ ನಾರಾಯಣ ಎಂಬವರು ಸಮಜಾಯಿಷಿ ನೀಡಿದ್ದಾರೆ. ಜಯರಾಂ ಹಾಗೂ ಪುಟ್ಟಸ್ವಾಮಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಲಕ್ಷ್ಮೀಕಾಂತ್ ದೂರು ನೀಡಿದ್ದು, ವನ್ಯಜೀವಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಬನ್ನೇರುಘಟ್ಟ ಪೊಲೀಸರು ತಿಳಿಸಿದ್ದಾರೆ.
ಮುಕ್ತವಾಗಿದ್ದ ಅರಣ್ಯ ಭೂಮಿಗೆ ಹೈಕೋರ್ಟ್ ಸೂಚನೆಯಂತೆ ಬೇಲಿ ನಿರ್ಮಿಸಲು ಮುಂದಾದಾಗ ಕೆಲವರು ಅಡ್ಡಿ ಪಡಿಸಿದ್ದಲ್ಲದೆ, ಬೇಲಿ ಹಾಕಲು ನಿರ್ಮಿಸಿದ್ದ ಫೌಂಡೇಷನ್ ಹಾನಿಗೊಳಿಸಿದ್ದಾರೆ. ಜತೆಗೆ ನಮ್ಮ ಸಿಬ್ಬಂದಿಯ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ವನ್ಯಜೀವಿ ಕಾಯ್ದೆ ಪ್ರಕಾರ ಇದು ಗಂಭೀರ ಪ್ರಕರಣವಾಗಿದ್ದು ಆ ಬಗ್ಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಟಿ ವಿ.ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ