ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ಪರಾರಿ
ಮಾಗಡಿ: ಕೈಹಿಡಿದ ಗಂಡನೇ, ಪತ್ನಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ತಾಲೂಕಿನ ಕರೇನಹಳ್ಳಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.
ಬಂದೂಕಿನ ಗುಂಡಿಗೆ ಗಂಗಮ್ಮ (32) ಸಾವನ್ನಪ್ಪಿದರೆ, ತಾಯಿ ಗಂಗಮ್ಮನ ಪಕ್ಕದಲ್ಲೇ ಮಲಗಿದ್ದ ಕಿರಿಯ ಮಗ ನಂದೀಶ್ ಕೈಗೂ ಗುಂಡು ತಗುಲಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸೋಮಣ್ಣ ಕಳೆದ 15 ವರ್ಷಗಳಿಂದ ನೇತೇನಹಳ್ಳಿ ಗ್ರಾಮ ಪಂಚಾಯ್ತಿ ವಾಟರ್ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಕುಡಿತದ ಚಟವಿದ್ದ ಸೋಮಣ್ಣ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಹೆಂಡತಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರ ಹೋಗಿದ್ದ ಎನ್ನಲಾಗಿದೆ. ಸೋಮಣ್ಣ ತನ್ನ ಸಹಚರರೊಂದಿಗೆ ಭಾನುವಾರ ತಡರಾತ್ರಿ ಮನೆಗೆ ಬಂದಿದ್ದಾನೆ. ಬಂದೂಕಿನ ಶಬ್ದಕ್ಕೆ ಗ್ರಾಮಸ್ಥರು ಠಾಣೆಗೆ ವಿಷಯ ಮುಟ್ಟಿಸಿದ್ದಾಗಿ ಪೊಲೀಸರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರ್ವಾಲ್, ಡಿವೈಎಸ್ಪಿ ರಾಮಲಿಂಗಪ್ಪ, ಸಿಪಿಐ ಯಲಗಯ್ಯ, ಪಿಎಸ್ಐ ಧರ್ಮೇಗೌಡ, ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಎಫ್ಎಸ್ಎಲ್ ಅಧಿಕಾರಿ ರವೀಂದ್ರ ಸಹ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಘಟನೆ ಕುರಿತು ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.